ಅನಧಿಕೃತ ಮರಳುಗಾರಿಕೆಗೆ ಕಡಿವಾಣ ಹಾಕಲು ಕ್ರಮ

ಮಂಗಳೂರು ಸೆ.30: ಸೆಪ್ಟೆಂಬರ್ 23 ರಂದು ನಡೆದ ಜಿಲ್ಲಾ ಮರಳು ಸಮಿತಿ ನಾನ್ ಸಿ.ಆರ್.ಝಡ್.  ಸಭೆ ಮತ್ತು ಮರಳು ದಿಬ್ಬಗಳನ್ನು ತೆರವುಗೊಳಿಸಲು ಇರುವ ಜಿಲ್ಲಾ 07 ಸದಸ್ಯರ ಸಮಿತಿ ಸಿ.ಆರ್.ಝಡ್. ಸಭೆಯಲ್ಲಿ ಚರ್ಚಿಸಿ ಈ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ 13 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ಮಾರ್ಗಸೂಚಿಗಳನುಸಾರ ಸೆಪ್ಟಂಬರ್ 23 ರಂದು ಜರುಗಿದ ಸಭೆಯ ತೀರ್ಮಾನದಂತೆ ಸಮಿತಿಯಲ್ಲಿ ಗುರುತಿಸಲಾಗಿರುವ ಅರ್ಹ ಸಾಂಪ್ರದಾಯಿಕ ಮರಳು ಪರವಾನಿಗೆದಾರರು ಉಪ ನಿರ್ದೇಶಕರ ಕಚೇರಿ,  ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು ಇಲ್ಲಿ ಅಗತ್ಯ ದಾಖಲೆಗಳೊಂದಿಗೆ 13 ಮರಳು ದಿಬ್ಬಗಳನ್ನು ತೆರವುಗೊಳಿಸಲು ತಾತ್ಕಾಲಿಕ ಅನುಮತಿ ನೀಡುವ ಸಂಬಂಧ ಅಕ್ಟೋಬರ್ 7 ರವರೆಗೆ ಅರ್ಜಿ ಆಹ್ವಾನಿಸಲು ತೀರ್ಮಾನಿಸಲಾಗಿದೆ.


 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ಸ್ವೀಕೃತವಾಗುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಸಾಂಪ್ರದಾಯಿಕ ಮರಳು ಪರವಾನಿಗೆದಾರರನ್ನು ಗುರುತಿಸಿ ಶಿಫಾರಸ್ಸು ಮಾಡುವ ಸಲುವಾಗಿ ಸಹಾಯಕ ಆಯುಕ್ತರು, ಮಂಗಳೂರು ಉಪ ವಿಭಾಗ ಇವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಿದೆ.ಈ ಸಮಿತಿ ನಿಯಮಾನುಸಾರವಾಗಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಿದೆ.


 ಸಿ.ಆರ್.ಝಡ್. ವ್ಯಾಪ್ತಿಯ ನದಿ ಪಾತ್ರಗಳಲ್ಲಿ ಯಾವುದೇ ರೀತಿಯ ಮರಳು ದಿಬ್ಬಗಳನ್ನು ಅನಧಿಕೃತವಾಗಿ ತೆಗೆಯದಂತೆ ಹಾಗೂ ಅನಧಿಕೃತ ಮರಳುಗಾರಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ರಚಿಸಿರುವ ಇಲಾಖಾವಾರು ತಂಡದ ಅಧಿಕಾರಿಗಳು ಚಾಚೂ ತಪ್ಪದೆ ಅವರಿಗೆ ನಿಗದಿಪಡಿಸಿರುವ ದಿನಗಳಲ್ಲಿ ಕಡ್ಡಾಯವಾಗಿ 24 x 7 ಕರ್ತವ್ಯ ನಿರ್ವಹಿಸಿ ಕಟ್ಟುನಿಟ್ಟಾಗಿ ನಿಯಂತ್ರಿಸಲು ಕ್ರಮ ಕೈಗೊಂಡು ವರದಿ ನೀಡಲು ಸಂಬಂಧಿಸಿದ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.


ನಾನ್ ಸಿ.ಆರ್.ಝಡ್‍ಗಳಲ್ಲಿ ಹೊಸ ಮರಳು ನೀತಿ – 2020 ರನ್ವಯ ಜಂಟಿ ಸ್ಥಳ ಪರಿಶೀಲನೆ ನಡೆಸಿ ಸಲ್ಲಿಸಿರುವ ವರದಿಯನುಸಾರ ತಾಲ್ಲೂಕು ಮರಳು ಸಮಿತಿ ಸಭೆಗಳ ನಡವಳಿಗಳೊಂದಿಗೆ ಶಿಫಾರಸ್ಸು ಮಾಡಿರುವ  ಮೊದಲನೇ, ಎರಡನೇ ಮತ್ತು ಮೂರನೇ ಶ್ರೇಣಿಯ ಹಳ್ಳ/ತೊರೆಗಳಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಗುರುತಿಸಿರುವ ಮರಳು ನಿಕ್ಷೇಪಗಳಿಂದ ಮರಳನ್ನು ತೆಗೆದು ವಿಲೇವಾರಿ ಮಾಡಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ವಹಿಸಿ ಅಧಿಸೂಚನೆ ಹೊರಡಿಸಲಾಗುವುದು.


ಪುತ್ತೂರು ತಾಲೂಕಿನ ಇರ್ದೆ ಗ್ರಾಮ ಸ.ನಂ 114,129-1ಎ, ವಿಸ್ತೀರ್ಣ 0.50 (ಎಕರೆಗಳಲ್ಲಿ),  ಬದಂತಡ್ಕ ಸೀರೆ ಹೊಳೆ ಹಳ್ಳ  ಮರಳು ನಿಕ್ಷೇಪ ಲಭ್ಯವಿರುವ ಸ್ಥಳ, ಮರಳು ಲಭ್ಯತೆಯ ಅಂದಾಜು ಪ್ರಮಾಣ 1,720 ಮೆಟ್ರಿಕ್ ಟನ್, ಕಡಬ ತಾಲೂಕಿನ ಪುಣ್ಚಪ್ಪಾಡಿ ಸ.ನಂ 72/1ಡಿ1, ವಿಸ್ತೀರ್ಣ (ಎಕರೆಗಳಲ್ಲಿ) 0.60 ಪುಣ್ಚಪ್ಪಾಡಿ ಜೋಡು ಕಾಲುವೆ ಮರಳು ನಿಕ್ಷೇಪ ಲಭ್ಯವಿರುವ ಸ್ಥಳ, ಮರಳು ಲಭ್ಯತೆಯ ಅಂದಾಜು ಪ್ರಮಾಣ 1,505 ಮೆಟ್ರಿಕ್ ಟನ್. ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಸ.ನಂ. 181/1 ವಿಸ್ತೀರ್ಣ (ಎಕರೆಗಳಲ್ಲಿ) 0.50, ಕಂದಡ್ಕ ಹೊಳೆ ಮರಳು ನಿಕ್ಷೇಪ ಲಭ್ಯವಿರುವ ಸ್ಥಳ, ಮರಳು ಲಭ್ಯತೆಯ ಅಂದಾಜು ಪ್ರಮಾಣ 577.92 ಮೆ.ಟನ್ ಆಗಿರುತ್ತದೆ.


 ಹೊಸ ಮರಳು ನೀತಿ 2020 ರನ್ವಯ ತುಂಬೆ ಡ್ಯಾಂನಲ್ಲಿ ಕುಡಿಯುವ ನೀರಿನ ಶೇಖರಣಾ ಪ್ರಮಾಣವನ್ನು ಹೆಚ್ಚಿಸಲು ಡ್ಯಾಂನ ಹಿನ್ನೀರಿನ ನದಿ ಪಾತ್ರದ ಪ್ರದೇಶದಲ್ಲಿ ಹೂಳಿನಲ್ಲಿ ದೊರಕುವ ಮರಳನ್ನು ತೆಗೆದು ವಿಲೇವಾರಿ ಮಾಡಲು ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು ಇವರಿಗೆ ವಹಿಸಲು ನಿರ್ಣಯಿಸಲಾಗಿದ್ದು, ಪ್ರಸ್ತುತ ಮಹಾನಗರಪಾಲಿಕೆಗೆ ನೀಡಿರುವ ಕಾಯಾದೇಶವನ್ನು ರದ್ದುಪಡಿಸಿ, ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ತುಂಬೆ ಡ್ಯಾಂನ ನದಿ ಪಾತ್ರದ ಪ್ರದೇಶದಲ್ಲಿ ಹೂಳಿನಲ್ಲಿ ಲಭ್ಯವಿರುವ ಮರಳು ತೆಗೆದು ವಿಲೇವಾರಿ ಮಾಡಲಾಗುವುದು.


ಮಂಗಳೂರು ತಾಲ್ಲೂಕು ಅದ್ಯಪಾಡಿ ಗ್ರಾಮ ವ್ಯಾಪ್ತಿಯಲ್ಲಿನ ಮರವೂರು ಡ್ಯಾಂ ಹಾಗೂ ಬಂಟ್ವಾಳ ತಾಲ್ಲೂಕು ನಾವೂರು-ಶಂಭೂರು ಗ್ರಾಮದ ವ್ಯಾಪ್ತಿಯಲ್ಲಿನ ನದಿ ಪಾತ್ರದ ಪ್ರದೇಶದಲ್ಲಿ ಹೂಳಿನಲ್ಲಿ ಲಭ್ಯವಿರುವ ಮರಳು ತೆಗೆದು ವಿಲೇವಾರಿ ಮಾಡುವ ಸಲುವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಹಾಗೂ ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್‍ನ ಅಧಿಕಾರಿಗಳೊಂದಿಗೆ ಕೂಡಲೇ ಜಂಟಿ ಸ್ಥಳ ಪರಿಶೀಲನೆ ನಡೆಸಿ ಸದರಿ ಡ್ಯಾಂಗಳ ನದಿ ಪಾತ್ರದ ಪ್ರದೇಶಗಳಲ್ಲಿ ಹೂಳಿನಲ್ಲಿ ಲಭ್ಯವಿರುವ ಮರಳು ತೆಗೆದು ಜಿಲ್ಲೆಯಲ್ಲಿನ ಸಾರ್ವಜನಿಕರಿಗೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಪೂರೈಕೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಣಯಿಸಿದೆ.


ಮಂಗಳೂರು ತಾಲೂಕಿನಲ್ಲಿ ಅನಧಿಕೃತ ಉಪ ಖನಿಜ ಗಣಿಗಾರಿಕೆ/ ಸಾಗಾಣಿಕೆ/ ದಾಸ್ತಾನು ತಡೆಗಟ್ಟುವ ನಿಟ್ಟಿನಲ್ಲಿ ಸಹಾಯಕ ಆಯುಕ್ತರು, ಮಂಗಳೂರು ಉಪ ವಿಭಾಗ ಇವರ ನೇತೃತ್ವದಲ್ಲಿ ಚಾಲಿತ ದಳವನ್ನು ರಚಿಸಲಾಗಿರುತ್ತದೆ.ಹೊಸ ಮರಳು ನೀತಿ – 2020 ರಂತೆ ಹಾಗೂ ಸರ್ಕಾರದ ಅಧಿಸೂಚನೆಯಂತೆ ಜಿಲ್ಲೆಯಲ್ಲಿನ ಅನಧಿಕೃತ ಉಪ ಖನಿಜ ಗಣಿಗಾರಿಕೆ/ ಸಾಗಾಣಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿನಿತ್ಯ ಕರ್ತವ್ಯ ನಿರ್ವಹಿಸುವ ಸಲುವಾಗಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಒಂದೊಂದು ಚಾಲಿತ ದಳವನ್ನು ರಚಿಸಲಾಗಿದೆ.

 ಜಿಲ್ಲೆಯಲ್ಲಿ ಲಭ್ಯವಿರುವ ಮರಳನ್ನು ನಿಯಮಾನುಸಾರವಾಗಿ ತೆಗೆದು ಜಿಲ್ಲೆಯಲ್ಲಿನ ಬೇಡಿಕೆ ಪೂರೈಸುವವರೆಗೂ , ಹೊರ ಜಿಲ್ಲೆಗಳಿಗೆ ಸಾಗಾಣಿಕೆಯಾಗುವುದನ್ನು ತಡೆಗಟ್ಟುವ ಸಲುವಾಗಿ , ಜಿಲ್ಲೆಯ ಗಡಿ ಭಾಗಗಳಲ್ಲಿ ತನಿಖಾ ಠಾಣೆಗಳನ್ನು ನಿರ್ಮಿಸಲು ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಂಟಿಯಾಗಿ ಸ್ಥಳಗಳನ್ನು ಗುರುತಿಸಿ, ಜಿಲ್ಲಾ ಮರಳು ಸಮಿತಿ/ ಜಿಲ್ಲಾ ಟಾಸ್ಕ್‍ಫೋರ್ಸ್ (ಗಣಿ) ಸಮಿತಿ ಸಭೆಗೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮರಳು ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!