ಶಾಮನೂರು ಶಿವಶಂಕರಪ್ಪ 7 ಬಾರಿ ಗೆದ್ದಿರುವುದು ಸ್ವಂತ ವರ್ಚಸ್ಸಿನಿಂದಲ್ಲ: ಎಚ್. ವಿಶ್ವನಾಥ್

ಮೈಸೂರು: ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿ ಬಾರಿ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಯಲ್ಲಿ ತಮ್ಮ ಬೀಗರನ್ನು ಗೆಲ್ಲಿಸಿಕೊಳ್ಳುತ್ತಿದ್ದಾರೆ, ಕಾಂಗ್ರೆಸ್‌‍ ಅಭ್ಯರ್ಥಿಯನ್ನು ಯಾಕೇ ಗೆಲ್ಲಿಸಿಕೊಳ್ಳುತ್ತಿಲ್ಲ ಎಂದು ಅಡಗೂರು ಎಚ್‌.ವಿಶ್ವನಾಥ್‌ ಪ್ರಶ್ನಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶಾಮನೂರು ಅವರು 7 ಬಾರಿ ಗೆದ್ದಿರುವುದು ಸ್ವಂತ ವರ್ಚಸ್ಸಿನಿಂದ ಅಲ್ಲ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳಿಂದ. ಲಿಂಗಾಯತ ಸಮುದಾಯವೇ ಅವರಿಗೆ ಓಟು ಹಾಕಿಲ್ಲ. ದಾವಣಗೆರೆಯನ್ನು ಅಪ್ಪ ಮಕ್ಕಳೇ ವಹಿಸಿಕೊಂಡಿದ್ದಾರೆ. ಹೀಗಾಗಿ ಅವರು ಯಾರಿಂದ ಗೆದ್ದಿದ್ದಾರೆ. ಯಾಕೇ ಎಂಪಿ ಚುನಾವಣೆ ಗೆಲ್ಲಲು ಆಗುತ್ತಿಲ್ಲ ಎಂಬುದನ್ನು ಮೊದಲು ತಿಳಿಸಲಿ ಎಂದು ಹೇಳಿದರು.

ಕುರಿ ನಡೆದಾಡುವ ಬ್ಯಾಂಕ್‌: ಕುರಿ, ಮೇಕೆ, ದನ ಸೇರಿದಂತೆ ಪಶು ಸಂಗೋಪನೆ ದೇಶದ ಸಂಪನ್ಮೂಲ ವಾಗಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಅರ್ಥ ಮಾಡಿಕೊಂಡಿಲ್ಲ. ಎಲ್ಲ ಸಮುದಾಯ ದಲ್ಲೂ ಕುರಿ ಸಾಕುವವರಿದ್ದಾರೆ. ಕುರಿ ಪ್ರತಿ ಮನೆಯ ಆಸ್ತಿ ಮತ್ತು ನಡೆದಾಡುವ ಬ್ಯಾಂಕ್‌. ಹೀಗಾಗಿ ಕುರಿಯ ಸಂಪನ್ಮೂಲವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನದ ವತಿಯಿಂದ ವಿಶ್ವನಾಥ್‌ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಜಾಕೀರ್‌ ಹುಸೇನ್‌, ಚಿಂತಕ ಪ್ರೊ.ಕೆ.ಎಸ್‌‍.ಭಗವಾನ್‌, ಲೇಖಕ ಮಾನಸ, ಹಿರಿಯ ರಂಗಕರ್ಮಿ ಜನಾರ್ಧನ್‌ (ಜನ್ನಿ), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಚಂದ್ರಶೇಖರ್‌, ಕರ್ನಾಟಕ ರಾಜ್ಯ ನಾಯಕರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ದ್ಯಾವಪ್ಪ ನಾಯಕ, ಕಟ್ಟಡ ಕಾರ್ಮಿಕರ ಸಂಘದ ಪಿ.ರಾಜು ಮುಂತಾದವರು ಹಾಜರಿದ್ದರು.

ಮಹಿಷ ದಸರಾ ಆಚರಣೆ ತಡೆಯುವುದು ಸರಿಯಲ್ಲ:

ಮಹಿಷಾ ದಸರಾ ಆಚರಣೆಯನ್ನು ತಡೆಯುವುದು ಸರಿಯಲ್ಲ ಎಂದು ಎಚ್‌.ವಿಶ್ವನಾಥ್‌ ಹೇಳಿದರು.

ಮಹಿಷಾ ದಸರಾವನ್ನು ಒಂದು ವರ್ಗ ಮಾಡಿಕೊಂಡು ಬಂದಿದೆ. ಜೊತೆಗೆ ಮಹಿಷನ ಆಚರಣೆಯ ಕುರಿತು ವಿವರಣೆ ನೀಡುತ್ತಿದ್ದಾರೆ. ಹೀಗಿದ್ದರೂ ಅದನ್ನು ತಡೆಯುವ ಯತ್ನವೇಕೆ? ಅದು ಕೂಡ ಚಾಮುಂಡಿ ಚಲೋ ಹೆಸರಿನಲ್ಲಿ ತಡೆಯಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

Leave a Reply

Your email address will not be published. Required fields are marked *

error: Content is protected !!