ಇಸ್ರೇಲ್ ಕದ್ದ ಭೂಮಿ, ಭಾರತ ಫೆಲೆಸ್ತೀನ್ ಪರ ನಿಲ್ಲಬೇಕು:ನಟ ಚೇತನ್ ಅಹಿಂಸಾ
ಬೆಂಗಳೂರು: ಇಸ್ರೇಲ್ ಹಾಗೂ ಫೆಲೆಸ್ತೀನ್ ಸಂಘರ್ಷದಲ್ಲಿ ಭಾರತವು ಫೆಲೆಸ್ತೀನ್ ಪರ ನಿಲ್ಲಬೇಕು ಎಂದು ಸಾಮಾಜಿಕ ಹೋರಾಟಗಾರ, ನಟ ಚೇತನ್ ಅಹಿಂಸಾ ಅವರು ಆಗ್ರಹಿಸಿದ್ದಾರೆ.
“ಫೆಲೆಸ್ತೀನ್ ನ ಹಮಾಸ್ 5,000 ರಾಕೆಟ್‌ಗಳನ್ನು ಉಡಾಯಿಸಿದ್ದರಿಂದ ಮತ್ತು ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದ್ದರಿಂದ ಇಸ್ರೇಲ್- ಫೆಲೆಸ್ತೀನ್ ನಲ್ಲಿ ಭಾರಿ ಹಿಂಸಾಚಾರ ಮತ್ತು ಸಾವುನೋವುಗಳು ಸಂಭವಿಸಿವೆ. ಈಗ ಪ್ರಧಾನಿ ಮೋದಿ ಇಸ್ರೇಲ್‌ಗೆ ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ, ಇಸ್ರೇಲ್ ದೇಶವು ಕದ್ದ ಭೂಮಿಯಲ್ಲಿ ನಿರ್ಮಿಸಲಾದ ದೇವಪ್ರಭುತ್ವದ ವಸಾಹತುಗಾರರ ಕಾಲೊನಿ. ಭಾರತವು ಇಸ್ರೇಲ್-ಯುಎಸ್ ಪ್ರಾಬಲ್ಯದ ದೌರ್ಜನ್ಯವನ್ನು ಪ್ರಶ್ನಿಸಬೇಕು ಮತ್ತು ಫೆಲೆಸ್ತೀನ್ ನ್ಯಾಯದ ಪರವಾಗಿ ನಿಲ್ಲಬೇಕು” ಎಂದು ಚೇತನ್ ಅಭಿಪ್ರಾಯ ಪಟ್ಟಿದ್ದಾರೆ.
“ಫೆಲೆಸ್ತೀಯನ್ನರಿಗೆ ನ್ಯಾಯವು ಅತ್ಯಗತ್ಯವಾಗಿರುತ್ತದೆ. ಆದರೆ, ಫೆಲೆಸ್ತೀನ್ ನ ಹಮಾಸ್ ಸತ್ತ ಇಸ್ರೇಲಿ ಮಹಿಳೆಯರ ದೇಹಗಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗಳು ಕ್ರೂರವಾಗಿದೆ ಮತ್ತು ಇದು ಖಂಡನೀಯ. ಪುರುಷರ ಆಕ್ರಮಣಕಾರಿ ಯುದ್ಧಗಳಿಗೆ ಮಹಿಳೆಯರ ದೇಹಗಳು ಯಾವಾಗಲೂ ಸಹಾಯಕ ಯುದ್ಧಭೂಮಿಗಳಾಗಿವೆ. ಇಂತಹ ಘರ್ಷಣೆಗಳ ಸಮಯದಲ್ಲಿ ಅವಮಾನವು ನ್ಯಾಯವನ್ನು ಮೀರಿಸುತ್ತದೆ ಎಂಬುದನ್ನು ಇಂತಹ ಘೋರ ಯುದ್ಧದ ಅಪರಾಧಗಳು ನಮಗೆ ನೆನಪಿಸುತ್ತವೆ” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.