ಭಾರತ್ ಜೋಡೋ ಯಾತ್ರೆ ಎಫೆಕ್ಟ್: ಲಡಾಖ್ ಚುನಾವಣೆಯಲ್ಲಿ ಎನ್‌ಸಿ, ಕಾಂಗ್ರೆಸ್ ಮೈತ್ರಿ ಕ್ಲೀನ್ ಸ್ವೀಪ್
ನವದೆಹಲಿ: ಕಾರ್ಗಿಲ್‌ನ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್(ಎಲ್‌ಎಚ್‌ಡಿಸಿ) ಚುನಾವಣೆಯಲ್ಲಿ ಕಾಂಗ್ರೆಸ್ ಹಲವು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಇದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ನೇರ ಪರಿಣಾಮ ಎಂದು ಕಾಂಗ್ರೆಸ್ ಹೇಳಿದೆ.
ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ರಾಷ್ಟ್ರೀಯ ಮಾಧ್ಯಮಗಳು ಇದನ್ನು ತೋರಿಸುವುದಿಲ್ಲ. ಆದರೆ ಕಾರ್ಗಿಲ್‌ನ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್‌ಗೆ ನಡೆದ ಚುನಾವಣೆಯ ಫಲಿತಾಂಶ ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಲಡಾಖ್‌ನಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯನ್ನು ಮುಂದುವರೆಸಿದ್ದರ ನೇರ ಪರಿಣಾಮ ಇದು ಎಂದು ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
LAHDC ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ಇದುವರೆಗೆ 17 ಸ್ಥಾನಗಳನ್ನು ಗೆದ್ದಿವೆ ಮತ್ತು ಮತಗಳ ಎಣಿಕೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಕ್ಟೋಬರ್ 4 ರಂದು LAHDCಯ 26 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದುವರೆಗೆ 20 ಸ್ಥಾನಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಆ ಪೈಕಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಒಂಬತ್ತು ಸ್ಥಾನಗಳನ್ನು ಗೆದ್ದಿದೆ ಮತ್ತು ಅದರ ಮಿತ್ರಪಕ್ಷ ಕಾಂಗ್ರೆಸ್ ಎಂಟರಲ್ಲಿ ಗೆಲುವು ದಾಖಲಿಸಿದೆ.
ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.