ಉಡುಪಿ ಜಿಪಂ ಸದಸ್ಯನಿಂದ ಕೋಟ್ಯಂತರ ಮೌಲ್ಯದ ಅಕ್ರಮ ಬಾಕ್ಸೈಟ್ ಸಾಗಾಟ? ಪೊಲೀಸರ ದಾಳಿ
ಬೈಂದೂರು ಸೆ30 : (ಉಡುಪಿ ಟೈಮ್ಸ್ ವರದಿ)ಇಲ್ಲಿನ ಒತ್ತಿನೆಣೆಯ ಸೆಳ್ಳೆಕುಳ್ಳಿ ಎನ್ನುವ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ಜಾಗದಲ್ಲಿ ಅಕ್ರಮವಾಗಿ ಬಾಕ್ಸೈಟ್ ಅಗೆದು ಸಾಗಾಟ ಮಾಡುತ್ತಿದ್ದ ಪ್ರದೇಶಕ್ಕೆ ಬೈಂದೂರು ಪೊಲೀಸರು ದಾಳಿ ಮಾಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ನಿಷೇಧಿತ ಬಾಕ್ಸೈಟ್ ಅದಿರನ್ನು ಅಗೆದು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಒತ್ತಿನೆಣೆಯ ಹಲವು ಪ್ರದೇಶದಲ್ಲಿ ಬಹು ಬೇಡಿಕೆ ಬಾಕ್ಸೈಟ್ ಪತ್ತೆಯಾಗಿದ್ದು, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ ಅವರ ಜಾಗದಲ್ಲಿದ್ದ ಈ ಬಾಕ್ಸೈಟ್ ನ್ನು ಶ್ರೀಕಾಂತ್ ಶೆಟ್ಟಿ ಕಳೆದ ಒಂದು ತಿಂಗಳಿನಿಂದ ಅಗೆದು ಆಂದ್ರಪ್ರದೇಶದ ಸಿಮೆಂಟ್ ಕಂಪೆನಿಗೆ ಗಣಿ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೇ ಸಾಗಾಟ ಮಾಡುತ್ತಿದ್ದರು ಎಂಬ ದೂರು ಇತ್ತು.
ಮಂಗಳವಾರ ಬೆಳಿಗ್ಗೆ ಬೈಂದೂರು ಎಸ್‌ಸೈ ಕುಮಾರಿ ಸಂಗೀತಾ ಅವರ ನೇತೃತ್ವದದಲ್ಲಿ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಎರಡು ಲಾರಿ ಹಾಗೂ ಒಂದು ಹಿಟಾಚಿ ಯಂತ್ರ ವಶ ಪಡೆಸಿಕೊಂಡಿದ್ದಾರೆ.
ಸರಕಾರಕ್ಕೆ ರಾಜಧನ ವಂಚಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಬಾಕ್ಸೈಟ್‌ನ್ನು ಅಕ್ರಮವಾಗಿ ಸಾಗಿಸಲಾಗಿದ್ದು, ಇದನ್ನು ಆಂಧ್ರಪ್ರದೇಶ ಹಾಗೂ ತಮಿಳುನಾಡಿ ಸಾಗಾಟ ಮಾಡಲಾಗಿದೆನ್ನಲಾಗಿದೆ. ಗಣಿ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿ, ೩೦ ಲಕ್ಷ ಮೆಟ್ರಿಕ್ ಟನ್ ಬಾಕ್ಸೈಟ್ ವಶಪಡಿಸಿಕೊಂಡಿದ್ದು, ಅಕ್ರಮವಾಗಿ ಬಾಕ್ಸೈಟ್ ಅಗೆಯಲು ಉಪಯೋಗಿಸುತ್ತಿದ್ದ ಹಿಟಾಚಿ ಯಂತ್ರ ವಶಕ್ಕೆ ತೆಗೆದುಕೊಂಡು ಒಂದುವವರೆ ಲಕ್ಷ ರೂ. ದಂಡ ವಿಧಿಸಿದ್ದಾಗಿ ಗಣಿ ಅಧಿಕಾರಿ ಗೌತಮ್ “ಉಡುಪಿ ಟೈಮ್ಸ್” ಗೆ ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ ಬಟ್ವಾಡಿ ಅವರನ್ನು “ಉಡುಪಿ ಟೈಮ್ಸ್” ಮಾತನಾಡಿಸಿದಾಗ ನಾನು ಫ್ಯಾಕ್ಟರಿ ನಿರ್ಮಾಣ ಮಾಡಲು ಜಾಗ ಸಮತಟ್ಟು ಮಾಡಲು ಶ್ರೀಕಾಂತ್ ಶೆಟ್ಟಿಯವರಿಗೆ ನೀಡಿದ್ದು, ನನಗೆ ಇಲ್ಲಿ ಯಾವುದೇ ಬಾಕ್ಸೈಟ್ ಇರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಸಮತಟ್ಟು ಮಾಡಲು ಯಾವುದೇ ಪರವಾನಿಗೆ ಪಡೆಯದ ಕಾರಣ ದಾಳಿ ಮಾಡಲಾಗಿದೆ ಎಂದರು.
Great work Mrs Sangeetha madam
{Ladi singam of Byndoor}