ನಾಳೆ ಸಂಪೂರ್ಣ ಲಾಕ್ ಡೌನ್ ಇಲ್ಲ: ಮುಖ್ಯಮಂತ್ರಿ ಕಚೇರಿ ಪ್ರಕಟಣೆ
ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಪ್ರತಿ ಭಾನುವಾರ ಹೇರಲಾಗಿದ್ದ ಕರ್ಫ್ಯೂವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೆರವುಗೊಳಿಸಿದ್ದಾರೆ.
ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
‘ನಾಳೆ ಅಂದರೆ ಮೇ 31ರಂದು ಸಂಪೂರ್ಣ ಲಾಕ್‌ಡೌನ್ ಕರ್ಫ್ಯೂ ಇರುವುದಿಲ್ಲ. ಲಾಕ್ ಡೌನ್ ಸಡಿಲಗೊಳಿಸಿದ ನಂತರ ರಾಜ್ಯದಲ್ಲಿ ಎಂದಿನಂತೆ ಇರುವ ದೈನಂದಿನ ಚಟುವಟಿಕೆ ನಾಳೆ ಕೂಡ ಇರುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತಿ ದಿನದಂತೆ ಭಾನುವಾರ ಬಸ್ ಸಂಚಾರ ಇರುತ್ತೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಎಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಂಚಾರ ಮಾಡಲಿದೆ. ಅಲ್ಲದೇ ಅಂತರ ರಾಜ್ಯ ಸಂಚಾರ ಕೂಡ ಇರುತ್ತದೆ. ಜೊತೆಗೆ ಆಟೋ, ಕ್ಯಾಬ್ ಎಲ್ಲ ಸಂಚಾರ ವ್ಯವಸ್ಥೆ ಕೂಡ ಇರುತ್ತದೆ.
ಹೋಟೆಲ್, ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. ಅದೇ ರೀತಿ ಹೋಟೆಲ್‍ನಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೂ ಪಾರ್ಕ್ ತೆರೆದಿರುತ್ತದೆ. ಜೊತೆಗೆ ಮದ್ಯದಂಗಡಿ ಕೂಡ ಓಪನ್ ಆಗುತ್ತದೆ.