ಗಣೇಶ ವಿಸರ್ಜನೆ ವೇಳೆ ಮಸೀದಿಗೆ ಮಂಗಳಾರತಿ ಪ್ರಕರಣ- ಮೂವರು ಪೊಲೀಸರ ಅಮಾನತು

ಕೊಪ್ಪಳ: ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ ಮೂವರ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಗಂಗಾವತಿ ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್‌ ಅಡಿವೇಶ ಎಸ್. ಗುದಿಗೊಪ್ಪ, ಸಬ್‌ ಇನ್‌ಸ್ಪೆಕ್ಟರ್‌ ಕಾಮಣ್ಣ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ಮರಿಯಪ್ಪ ಅಮಾನತುಗೊಂಡವರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಈ ವಿಷಯ ಖಚಿತಪಡಿಸಿದ್ದಾರೆ.

ಇಲ್ಲಿನ ಎಂಜಿ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಮುಂಭಾಗ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಂಗಳವಾರ ರಾತ್ರಿ ಕೆಲವರು ಕುಂಡದಲ್ಲಿ ಬೆಂಕಿಹಚ್ಚಿ, ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದ್ದರು. ಇದು ಮುಸ್ಲಿಂ ಸಮುದಾಯ ದವರ ಆಕ್ಷೇಪಕ್ಕೆ ಕಾರಣವಾಗಿ ವಾಗ್ವಾದ ನಡೆದಿತ್ತು. ಕರ್ತವ್ಯದ ವೇಳೆಯಲ್ಲಿಯೇ ಮೆರವಣಿಗೆ ಸಮಯದಲ್ಲಿ ಮರಿಯಪ್ಪ ಅವರನ್ನು ಹೊತ್ತು ಕುಣಿದಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಸಂಬಂಧ ನಗರ ಠಾಣೆಯಲ್ಲಿ ಸಮಿತಿಯ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದೀಗ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಹಾಗೂ ಕಾನೂನು ಪಾಲನೆಯಲ್ಲಿ ಲೋಪ ಎಸಗಿದ ಆರೋಪದ ಮೇಲೆ ನಗರ ಠಾಣೆಯ ಮೂವರು ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಗಂಗಾವತಿ ನಗರ ಠಾಣೆಯ ಪಿಐ ಆಗಿ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳುವಂತೆ ಮಂಜುನಾಥ್ ಎಂಬುವರಿಗೆ ಕೊಪ್ಪಳ ಎಸ್​ಪಿ ಸೂಚಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!