256 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಮೀಸಲಾತಿ ನಿಗದಿಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದ 256 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿ ಮಾಡಲು ಅನುಸರಿಸಬೇಕಾದ ವಿಧಾನಗಳ ಕುರಿತು ನಗರಾಭಿವೃದ್ಧಿ ಇಲಾಖೆ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಹೊಸ ಮಾರ್ಗಸೂಚಿಗಳ ಪಾಲನೆಗಾಗಿ ನಿಯಮಗಳಲ್ಲಿ ತಂದಿರುವ ತಿದ್ದುಪಡಿಗಳನ್ನು ಸೆ. 15ರಿಂದ ಪೂರ್ವಾನ್ವಯವಾಗುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಈ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆದು ಎರಡೂವರೆ ವರ್ಷಗಳಾಗಿವೆ. ಆದರೆ, ಮೀಸಲಾತಿ ನಿಗದಿಗೆ ಸಂಬಂಧಿಸಿದ ವಿವಾದದ ಕಾರಣದಿಂದ ಈವರೆಗೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರ ಆಯ್ಕೆ ಈ ಮಾರ್ಗಸೂಚಿ ಪ್ರಕಾರವೇ ನಡೆಯಲಿದೆ.

ನಗರಸಭೆ: 39 ನಗರಸಭೆಗಳ ಪೈಕಿ ತಲಾ ಐದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳನ್ನು ಪರಿಶಿಷ್ಟ ಜಾತಿಗೆ, ತಲಾ ಐದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳನ್ನು ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡಗಳಿಗೆ ತಲಾ ಎರಡು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಹಾಗೂ ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ತಲಾ ಎರಡು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.

ಹಿಂದುಳಿದ ವರ್ಗಗಳ ‘ಎ’ (ಬಿಸಿಎಂ–ಎ) ಪ್ರವರ್ಗಕ್ಕೆ ತಲಾ ಆರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಹಾಗೂ ಬಿಸಿಎಂ– ಮಹಿಳೆಯರಿಗೆ ತಲಾ ಆರು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳು ದೊರಕಲಿವೆ. ಬಿಸಿಎಂ–ಬಿ ಪ್ರವರ್ಗಕ್ಕೆ ತಲಾ ಎರಡು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಹಾಗೂ ಬಿಸಿಎಂ–ಬಿ ಮಹಿಳೆಯರಿಗೆ ತಲಾ ಒಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ತಲಾ 15 ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ತಲಾ 15 ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ನಿಗದಿಪಡಿಸಲಾಗಿದೆ.

117 ಪುರಸಭೆಗಳ ಪೈಕಿ ತಲಾ 10 ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಪರಿಶಿಷ್ಟ ಜಾತಿಗೆ ಮತ್ತು ತಲಾ 10 ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಪರಿಶಿಷ್ಟ ಜಾತಿ ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡಗಳಿಗೆ ತಲಾ ನಾಲ್ಕು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ತಲಾ ನಾಲ್ಕು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ನಿಗದಿಪಡಿಸಲಾಗಿದೆ.

ಬಿಸಿಎಂ– ಎ ಪ್ರವರ್ಗಕ್ಕೆ ತಲಾ 12 ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಹಾಗೂ ಬಿಸಿಎಂ–ಎ ಮಹಿಳೆಯರಿಗೆ ತಲಾ 12 ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಬಿಸಿಎಂ–ಬಿ ಪ್ರವರ್ಗಕ್ಕೆ ತಲಾ ಮೂರು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಹಾಗೂ ಬಿಸಿಎಂ– ಮಹಿಳೆಯರಿಗೆ ತಲಾ ಮೂರು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ತಲಾ 30 ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮತ್ತು ಸಾಮಾನ್ಯ ಮಹಿಳೆಯರಿಗೆ ತಲಾ 29 ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನಿಗದಿ ಮಾಡಲಾಗಿದೆ.

100 ಪಟ್ಟಣ ಪಂಚಾಯಿತಿಗಳಲ್ಲಿ ತಲಾ 9 ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗ
ಳನ್ನು ಪರಿಶಿಷ್ಟ ಜಾತಿಗೆ ಮತ್ತು ತಲಾ ಎಂಟು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಕಾಯ್ದಿರಿಸಲಾಗಿದೆ. ಪರಿಶಿಷ್ಟ ಪಂಗಡಗಳಿಗೆ ತಲಾ ನಾಲ್ಕು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳು, ಪ. ಪಂಗಡಗಳ ಮಹಿಳೆಯರಿಗೆ ತಲಾ ಮೂರು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿ ಮಾಡಲಾಗಿದೆ.

ಬಿಸಿಎಂ–ಎ ಪ್ರವರ್ಗಕ್ಕೆ ತಲಾ 11 ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಹಾಗೂ ಬಿಸಿಎಂ–ಎ ಮಹಿಳೆಯರಿಗೆ ತಲಾ 10 ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳು ದೊರಕಲಿವೆ. ಬಿಸಿಎಂ–ಬಿ ಪ್ರವರ್ಗಕ್ಕೆ ತಲಾ ಮೂರು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಹಾಗೂ ಬಿಸಿಎಂ– ಬಿ ಮಹಿಳೆಯರಿಗೆ ತಲಾ ಎರಡು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಸಾಮಾನ್ಯ ವರ್ಗ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ತಲಾ 25 ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿ ಮಾಡಲಾಗಿದೆ. 

Leave a Reply

Your email address will not be published. Required fields are marked *

error: Content is protected !!