ಲಖಿಂಪುರ ಕೇರಿ ರೈತ ಪ್ರಕರಣ: ಉಡುಪಿಯಲ್ಲಿ ಕಪ್ಪು ದಿನ
ಉಡುಪಿ: ರೈತರ ಐತಿಹಾಸಿಕ ದೆಹಲಿ ಹೋರಾಟದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಲಖಿಂಪುರ ಕೇರಿಯಲ್ಲಿ ರೈತರು ನಡೆಸಿದ ಹೋರಾಟವನ್ನು ಹತ್ತಿಕ್ಕಲು ಎರಡು ವರ್ಷಗಳ ಹಿಂದೆ ಗೃಹ ವ್ಯವಹಾರಗಳ ಕೇಂದ್ರ ಸಚಿವ ಅಜಯ್ ಮಿಶ್ರಾ ಹೋರಾಟಗಾರರಿಗೆ ಬೆದರಿಕೆ ಒಡ್ಡಿದ ಬೆನ್ನಲ್ಲೇ ಅಜಯ್ ಮಿಶ್ರ ಮಗ ಆಶಿಷ್ ಮಿಶ್ರ ರೈತ ಹೋರಾಟಗಾರರ ಮೇಲೆ ಕಾರು ಹರಿಸಿ ನಾಲ್ಕು ರೈತರು ಹಾಗೂ ಒಬ್ಬ ಪತ್ರಿಕಾ ವರದಿಗಾರನ ಕೊಲೆಗೆ ಕಾರಣವಾದ ದಿನವನ್ನು ಸಿಐಟಿಯು ಹಾಗೂ ರೈತ ಸಂಘಟನೆಗಳು ದೇಶದಾದ್ಯಂತ ಕಪ್ಪು ದಿನ ಆಚರಿಸಿ ಹತ್ಯೆಗೆ ಕಾರಣಕರ್ತರಾದ ಸಚಿವ ಅಜಯ್ ಮಿಶ್ರಾನನ್ನು ಸಂಪುಟದಿಂದ ಕೈ ಬಿಟ್ಟು ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಉಡುಪಿ ಅಜ್ಜರಕಾಡುವಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ರೈತ ಮುಖಂಡ ಚಂದ್ರಶೇಖರ ಮಾತನಾಡಿದರು, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕವಾಗಿ ಮಾತನಾಡಿ, ಅಮಾನವೀಯ ಕೃತ್ಯ ಎಸಗಿದವರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ ಶಂಕರ್, ಶಶಿಧರ ಗೊಲ್ಲ, ಎಚ್ ನರಸಿಂಹ, ಮಹಾಬಲ ವಡೇರಹೋಬಳಿ, ಸಂತೋಷ ಹೆಮ್ಮಾಡಿ, ರಾಜು ದೇವಾಡಿಗ,ರವಿ ವಿಎಂ, ಸದಾಶಿವ ಪೂಜಾರಿ,ಸುಭಾಶ್ ನಾಯಕ್ ಮೊದಲಾದವರಿದ್ದರು.