ಪ್ಲಾಸ್ಟಿಕ್ ತ್ಯಜಿಸಿ, ಉತ್ತಮ ಆರೋಗ್ಯ ಹೊಂದುವಂತೆ ಉಡುಪಿ ನಗರಸಭೆ ಮನವಿ

ಉಡುಪಿ, ಅ.03: ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆ, ವಾಣಿಜ್ಯ ಕಟ್ಟಡ, ಅಂಗಡಿ, ಹೋಟೆಲ್ ಇತರೆ ಕಟ್ಟಡಗಳಿಂದ ಉತ್ಪತ್ತಿಯಾಗುವಂತಹ ಘನತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿ ಬೇರ್ಪಡಿಸಿ, ಹಸಿಕಸ, ಒಣಕಸ, ಅಪಾಯಕಾರಿ ಕಸಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಹಸಿಕಸವನ್ನು ಮನೆಯಲ್ಲಿ ಗೊಬ್ಬರವಾಗಿ ಪರಿವರ್ತನೆ ಮಾಡಬೇಕು.

100 ಕೆ.ಜಿ.ಗಿಂತ ಹೆಚ್ಚು ಉತ್ಪತ್ತಿಯಾಗುವಂತಹ ಬಹುಮಹಡಿ ಕಟ್ಟಡ, ಹೋಟೆಲ್‌ನವರು ಹಸಿಕಸವನ್ನು ಕಾಂಪೋಸ್ಟ್ ಮಾಡಿ ಮರುಬಳಕೆ ಮಾಡಬೇಕು.

ಕರ್ನಾಟಕ ಮುನ್ಸಿಪಲ್ ಮ್ಯಾನೇಜ್ ವೇಸ್ಟ್ 2016 ರಲ್ಲಿ ಈ ಅಂಶವನ್ನು ಅಳವಡಿಸಿದ್ದು, ಇದನ್ನು ಮಾಲೀಕರು ಕಡ್ಡಾಯವಾಗಿ ನಿರ್ವಹಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮನೆಗಳಲ್ಲಿ, ಮದುವೆ ಮಂಟಪ, ಸಮಾರಂಭಗಳ ಹಾಲ್‌ಗಳಲ್ಲಿ ಕಡ್ಡಾಯವಾಗಿ ಮರುಬಳಕೆಯಾಗುವ ಸ್ಟೀಲ್ ತಟ್ಟೆ, ಸ್ಟೀಲ್ ಲೋಟ, ಕುಡಿಯುವ ನೀರು, ವಾಟರ್‌ಫಿಲ್ಟರ್ ಬಳಸಬೇಕು. ಸಭೆ, ಸಮಾರಂಭಗಳಲ್ಲಿ ಮರುಬಳಕೆ ವಸ್ತುಗಳನ್ನು ಉಪಯೋಗಿಸುವುದರಿಂದ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡುವುದರೊಂದಿಗೆ ನಗರವನ್ನು ಸ್ವಚ್ಛವಾಗಿಡಲು ಸಹಕಾರಿಯಾಗುತ್ತದೆ.

ತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಹಾಕಿ ರಸ್ತೆ ಬದಿ, ಖಾಲಿ ಸ್ಥಳ, ಚರಂಡಿಗಳಲ್ಲಿ ಬಿಸಾಡುವುದರಿಂದ ಆಹಾರಕ್ಕಾಗಿ ಪ್ರಾಣಿಗಳು ಪ್ಲಾಸ್ಟಿಕನ್ನು ತಿಂದು ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಮರಣ ಹೊಂದುತ್ತಿವೆ. ಈ ರೀತಿ ತ್ಯಾಜ್ಯ ವಸ್ತುಗಳನ್ನು ರಸ್ತೆಬದಿಯಲ್ಲಿ, ಖಾಲಿ ಸ್ಥಳಗಳಲ್ಲಿ ಹಾಗೂ ನೀರಿಗೆ ಬಿಸಾಡುವಂತಹ ವ್ಯಕ್ತಿಗಳು ಕಂಡುಬಂದಲ್ಲಿ ಅವರುಗಳನ್ನು ಗುರುತಿಸಿ ಅವರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ಏಕರೂಪದ ಪ್ಲಾಸ್ಟಿಕ್ ಬಳಕೆಯನ್ನು ಸರಕಾರವು ಈಗಾಗಲೇ ನಿಷೇಧಿಸಿದ್ದು, ಅಂತಹ ಪ್ಲಾಸ್ಟಿಕ್ ಬಳಸುವವರ ಮತ್ತು ಮಾರುವವರ ವಿರುದ್ಧ ಕ್ರಮ ಜರುಗಿಸಿ, ದಂಡ ವಿಧಿಸಲಾಗುವುದು. ಪ್ರತಿ ನಾಗರಿಕರು ಪೇಟೆಗೆ ಬರುವಾಗ ಬಟ್ಟೆ ಚೀಲ, ತಂಗು ಚೀಲ, ತೆಗೆದು ಕೊಂಡು ಬಂದು ಸಾಮಾಗ್ರಿ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್, ಚೀಲ ಕೇಳುವಂತಿಲ್ಲ. ಪ್ಲಾಸ್ಟಿಕ್ ಸಂಪೂರ್ಣ ತ್ಯಜಿಸುವುದ ರಿಂದ ಉತ್ತಮ ಗಾಳಿ, ಪರಿಸರ ಹಾಗೂ ಜಲ ಪಡೆಯ ಬಹುದಾಗಿದೆ.

ಪ್ಲಾಸ್ಟಿಕ್ ವಸ್ತುಗಳಿಂದ ಅನೇಕ ಸಾಂಕ್ರಾಮಿಕ ರೋಗಗಳಾದ ಕ್ಯಾನ್ಸರ್ ಹಾಗೂ ಇತರೆ ಗಂಭೀರ ಕಾಯಿಲೆಗಳು ಉಂಟಾಗುತ್ತದೆ. ಆದ್ದರಿಂದ ಪ್ಲಾಸ್ಟಿಕ್ ತ್ಯಜಿಸಿ ಉತ್ತಮ ಆರೋಗ್ಯ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply

Your email address will not be published. Required fields are marked *

error: Content is protected !!