ಬಿಜೆಪಿ ಸೇರಿದ ಪಾದ್ರಿಯನ್ನು ಕರ್ತವ್ಯದಿಂದ ವಜಾಗೊಳಿಸಿದ ಚರ್ಚ್
ಇಡುಕ್ಕಿ: ಸಿರಿಯನ್-ಮಲಬಾರ್ ಚರ್ಚ್‌ನ ಇಡುಕ್ಕಿ ಧರ್ಮಪ್ರಾಂತ್ಯದ ಅಡಿಯಲ್ಲಿರುವ ಕ್ಯಾಥೋಲಿಕ್ ಪಾದ್ರಿಯೊಬ್ಬರು ಬಿಜೆಪಿ ಸೇರಿದ ಕೆಲವೇ ಗಂಟೆಗಳ ನಂತರ ಸೋಮವಾರ ಅವರನ್ನು ವಿಕಾರ್ ಹುದ್ದೆಯಿಂದ ಚರ್ಚ್ ತೆಗೆದುಹಾಕಿದೆ ಎಂದು ವರದಿಯಾಗಿದೆ.
ಫಾದರ್ ಕುರಿಯಕೋಸ್ ಮಟ್ಟಂ ಅವರು ಸೋಮವಾರ ಪಕ್ಷದ ಇಡುಕ್ಕಿ ಜಿಲ್ಲಾಧ್ಯಕ್ಷ ಕೆ ಎಸ್ ಅಜಿ ಅವರಿಂದ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದರು. ಇದಾಗಿ ಕೆಲವೇ ಗಂಟೆಗಳಲ್ಲಿ, ಇಡುಕ್ಕಿ ಧರ್ಮಪ್ರಾಂತ್ಯವು ಅವರ ವಿರುದ್ಧ ಕ್ರಮವನ್ನು ಕೈಗೊಂಡಿದೆ.
ಆದಿಮಲಿ ಬಳಿಯ ಮಂಕುವಾ ಸೇಂಟ್ ಥಾಮಸ್ ಚರ್ಚ್‌ನ ಫಾದರ್ ಕುರಿಯಕೋಸ್ ಮಟ್ಟಮ್ ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಚರ್ಚ್ ತಿಳಿಸಿದೆ.
ಚರ್ಚ್‌ನ ಪಾದ್ರಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವಂತಿಲ್ಲ, ಅಥವಾ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಿಲ್ಲ, ಹಾಗಾಗಿ, ಕಾನೂನಿನ ಪ್ರಕಾರ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಚರ್ಚ್ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
74 ವರ್ಷದ ಪಾದ್ರಿ ಕೆಲವೇ ತಿಂಗಳುಗಳಲ್ಲಿ ನಿವೃತ್ತರಾಗಲಿದ್ದರು ಎಂದು ಚರ್ಚ್ ಮೂಲಗಳು ತಿಳಿಸಿವೆ.”