ಬೈಂದೂರು: ಕದಿಕೆ ಟ್ರಸ್ಟ್ ನಿಂದ ಕೈ ಮಗ್ಗ ನೇಕಾರಿಕೆ ತರಬೇತಿ ಕಾರ್ಯಕ್ರಮ
ಬೈಂದೂರು: ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಯ್ಗೆ ಪುನಶ್ಚೇತನಗೊಳಿಸಿದ ಕದಿಕೆ ಟ್ರಸ್ಟ್‌ನಿಂದ ಬೈಂದೂರು ತಾಲ್ಲೂಕಿನ ಏಳಜಿತ್‌ನ ಸರೋಜ ಅಣ್ಣಪ್ಪ ಅವರ ಮಗ್ಗದ ಮನೆಯಲ್ಲಿ ಅಕ್ಟೋಬರ್ 2, ಗಾಂಧಿ ಜಯಂತಿಯಂದು ಹೊಸ ಕೈ ಮಗ್ಗ ನೇಕಾರಿಕೆ ತರಬೇತಿ ಆರಂಭಿಸಲಾಗಿದೆ.
ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದ, ಬೇರೆ ಉದ್ಯೋಗ ಅವಕಾಶವೂ ಇಲ್ಲದ ಒಳ ಪ್ರದೇಶ ವಾದ ಹೊಸೆರಿಯ ಏಳು ಯುವಜನರು ಈ ಯೋಜನೆಯಲ್ಲಿ ತರಬೇತಿ ಪಡೆಯಲಿದ್ದಾರೆ. 6 ತಿಂಗಳ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಕದಿಕೆ ಟ್ರಸ್ಟ್ ವತಿಯಿಂದ ಸ್ಟೈಪೆಂಡ್ ಜೊತೆಗೆ ತಿರುವಂನಂತಪುರದ ಪ್ರಖ್ಯಾತ ತರಬೇತಿದಾರ ಚಂದ್ರನ್ ಅವರಿಂದ ತರಬೇತಿ ಕೊಡಿಸಲಾಗುವುದು.
ಶಿಬಿರರ್ಥಿಗಳು ಅಡಿಕೆ ಚೊಗರು ಮತ್ತು ಇತರ ಸಹಜ ಬಣ್ಣಗಳ ವಿವಿಧ ಕೈ ಮಗ್ಗ ಉತ್ಪನ್ನಗಳನ್ನು ತಯಾರಿಸ ಲಿದ್ದಾರೆ. ಕಾರ್ಯಕ್ರಮ ಗಾಂಧೀಜಿಯವರ ಸ್ಮರಣಾರ್ಥವಾಗಿ ಎಲ್ಲರೂ ಸೇರಿ ರಘುಪತಿ ರಾಘವ ಪ್ರಾರ್ಥನಾ ಗೀತೆ ಹಾಡುವುದರೊಂದಿಗೆ ಆರಂಭವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಗಾನ್ ಸೊಸೈಟಿ ಸಂಸ್ಥಾಪಕ ಶಂಕರ ನಾರಾಯಣ ಅವರು ಗಾಂಧೀಜಿಯವರು ಪ್ರತಿಪಾದಿಸಿದ ಸುಸ್ಥಿರ ಗ್ರಾಮೋದ್ಯೋಗದ ಅವಕಾಶವೊಂದನ್ನು ಈ ಪ್ರದೇಶದಲ್ಲಿ ಆರಂಭಿಸಿದ್ದಕ್ಕೆ ಕದಿಕೆ ಟ್ರಸ್ಟ್ ನ್ನು ಅಭಿನಂದಿಸಿದರು.
ಕದಿಕೆ ಟ್ರಸ್ಟ್‌ನ ಟ್ರಸ್ಟೀ ಶ್ರೀಕುಮಾರ್ ನಕ್ರೆ ಹವಾಮಾನ ಬದಲಾವಣೆಯ ಪ್ರಸ್ತುತ ಪರಿಸ್ಥಿತಿಯಲ್ಲಿ ಗಾಂಧಿ ಚಿಂತನೆಯ ಮಹತ್ವ ತಿಳಿಸಿದರು. ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಕದಿಕೆ ಟ್ರಸ್ಟ್ ನ ಕಾರ್ಯ ಮತ್ತು ತರಬೇತಿಯ ಉದ್ದೇಶದ ಕುರಿತು ಮಾಹಿತಿ ನೀಡಿದರು.
ಕದಿಕೆ ಟ್ರಸ್ಟ್ ಕಾರ್ಯದರ್ಶಿ ಬಿ ಸಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶಿವಳ್ಳಿ ನೇಕಾರರ ಸಂಘದ ಎಂ ಡಿ ಶಶಿಕಾಂತ ಕೋಟ್ಯಾನ್, ಉಡುಪಿ ನೇಕಾರರ ಸಂಘದ ಎಂ ಡಿ ದಿನೇಶ್ ಕುಮಾರ್, ಹಿರಿಯ ಕೃಷಿಕರಾದ ಲಿಂಗಯ್ಯ ಮರಾಟಿ, ನಾರಾಯಣ ಗಾಣಿಗ, ಸುಶೀಲ ನಾಯ್ಕ್, ಮಹಾಬಲ ಮರಾಟಿ, ಕದಿಕೆ ಟ್ರಸ್ಟ್ ನ ಟ್ರಸ್ಟಿಗಳಾದ ಪುರುಷೋತ್ತಮ ಅಡ್ವೇ, ಸಚಿನ್ ಕುಮಾರ್, ಊರಿನ ಹಿರಿಯರು, ಯುವಕರು ಮತ್ತು ಮಕ್ಕಳು ಭಾಗವಹಿಸಿದ್ದರು.