ಗಾಂಧಿ ವಿಚಾರಧಾರೆಗಳಿಂದ ಇಂದು ಭಾರತ ಉಳಿದಿದೆ, ಬೆಳೆದಿದೆ- ಶ್ರೇಯಸ್ ಕೋಟ್ಯಾನ್

ಉದ್ಯಾವರ: ಇಂದು ಭಾರತ ದೇಶ ಉಳಿದಿದೆ ಮತ್ತು ಬೆಳೆದಿದೆ ಎಂದಾದರೆ ಅದು ಗಾಂಧೀಜಿಯವರ ವಿಚಾರಧಾರೆ ಗಳಿಂದ. ಹಾಗಾಗಿ ಗಾಂಧಿಯವರ ವಿಚಾರ ಮಾತನಾಡುವುದು, ಚರ್ಚೆ ಮಾಡುವುದು, ಅವರ ಸೈದ್ಧಾಂತಿಕತೆಯನ್ನು ಅರ್ಥೈಸಿಕೊಳ್ಳುವುದು ಈ ಕಾಲದ ತುರ್ತು. ಆದರೆ ಇಂದು ಅವರನ್ನು ಸ್ವಚ್ಛತೆಗೆ ಸೀಮಿತಗೊಳಿಸಲಾಗುತ್ತಿದೆ. ನಾವು ಅವರನ್ನು ಈ ರೀತಿ ಸೀಮಿತಗೊಳಿಸುವುದರ ಮೂಲಕ, ಅದರ ಆಚೆಗಿನ ಗಾಂಧಿ ಚಿಂತನೆಗಳು ಮುಂದಿನ ಪೀಳಿಗೆಗೆ ದಾಟುವುದಿಲ್ಲ. ಗಾಂಧಿ ಎಂದರೆ ಸ್ವಚ್ಛತೆಯ ಪ್ರತಿಪಾದಿಸಿದವರು ಎಂಬ ಮಾತು ಉಳಿದುಬಿಡುತ್ತದೆ. ಇದು ನಿಜವಾಗಿಯೂ ದೇಶದ ಬೆಳವಣಿಗೆಗೆ ಅಪಾಯ. ಧರ್ಮವನ್ನು ರಾಜಕೀಯದಲ್ಲಿ ಅದ್ಭುತವಾಗಿ ಬಳಸಿದವರು ಗಾಂಧೀಜಿಯವರು.

ಗಾಂಧೀಜಿಯವರು ಹಿಂದೂ ಧರ್ಮದ ಬಗ್ಗೆ ಮಾತನಾಡ ತೊಡಗಿದರೆ ಬ್ರಾಹ್ಮಣರಿಗೆ ,ದಲಿತರಿಗೆ ,ಈ ದೇಶದ ಮೇಲ್ವರ್ಗದವರಿಗೆ ಗಾಂಧೀಜಿ ನಮ್ಮ ಬಗ್ಗೆ ಮಾತಾಡುತ್ತಾರೆ ಎಂದೆನಿಸುತ್ತಿತ್ತು. ಅಷ್ಟೇ ಏಕೆ ಮುಸ್ಲಿಮರಿಗೂ ಗಾಂಧಿ ನಮ್ಮ ಪರವಾಗಿ ಮಾತಾಡುತ್ತಾರೆ ಎಂದು ಅನಿಸುತ್ತಿತ್ತು. ಜಾತ್ಯಾತೀತತೆ ಎಂದರೆ ಧರ್ಮ ವಿರೋಧಿ ಅಲ್ಲ .ತಮ್ಮ ಧರ್ಮದ ಆಚರಣೆಯನ್ನು ಮಾಡುತ್ತಲೇ ಬೇರೆ ಧರ್ಮವನ್ನು ಗೌರವಿಸುವುದು ಮತ್ತು ಕೊನೆಗೆ ಯಾವ ಧರ್ಮವು ಹೆಚ್ಚು ಅಲ್ಲ ಕಮ್ಮಿ ಅಲ್ಲ ಎಂದು ಭೋದಿಸುವುದು. ಗಾಂಧಿ ಧರ್ಮವನ್ನು ರಾಜಕೀಯವಾಗಿ ಬಳಸುತ್ತಿದ್ದದ್ದು ಅದು ಈಗಿನ ಸೆಕ್ಯುಲರಿಸಂ ಇರುವ ರೀತಿ. ಗಾಂಧಿ ಜಾತ್ಯಾತೀತ ನಿಲುವು ನಮ್ಮೊಳಗಿನ ದ್ವೇಷ ಭಾಷೆಯನ್ನ ಮೃದುಗೊಳಿಸು ವ ಪ್ರಯತ್ನ ಮಾಡುತ್ತಿತ್ತು. ಆದರೆ ಇಂದಿನ ನಾಯಕರು ಈ ದ್ವೇಷ ಭಾಷೆಯನ್ನು ಇನ್ನಷ್ಟು ಕಠಿಣ ಗೊಳಿಸುತ್ತಿದ್ದಾರೆ . ಇದು ಈ ಕಾಲದ ದುರಂತ ಎಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿದ್ಯಾರ್ಥಿ ಶ್ರೀ ಶ್ರೇಯಸ್ ಕೋಟ್ಯಾನ್ ರವರು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಜಂಟಿ ಆಯೋಜನೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರೀ ಜಯಂತಿಯ ಹಿನ್ನಲೆಯಲ್ಲಿ ಜರಗಿದ “ಗಾಂಧಿ ಸ್ಮೃತಿ” ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

ಅವರು ಮುಂದುವರಿಯುತ್ತಾ ಗಾಂಧಿಯವರ ಶಾಂತಿಯ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಲು ತಡವಾಯಿತು ಎಂಬ ವಾದವಿದೆ. ಒಂದು ರೀತಿಯಲ್ಲಿ ಅದು ಸರಿಯೂ ಕೂಡ 1921ಅಸಹಕಾರ ಚಳವಳಿ ತೀವ್ರ ವಾದ ಸಂದರ್ಭ ಇನ್ನೇನು ಒಂದೆರಡು ತಿಂಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕೇ ಬಿಡುತ್ತದೆ ಎನ್ನುವಾಗ ಚೌರಚೌರಿಯಲ್ಲಿ ಪೊಲೀಸ್ ಸ್ಟೇಷನ್ ಒಂದನ್ನು ಚಳವಳಿಗಾರರು ಸುಟ್ಟುಬಿಡುತ್ತಾರೆ. ಇದರಿಂದ ಬೇಸರಗೊಂಡ ಗಾಂಧಿ ಅಸಹಕಾರ ಚಳವಳಿಯನ್ನೇ ನಿಲ್ಲಿಸಿ ಬಿಡುತ್ತಾರೆ. ಇದರಿಂದಾಗಿ ಸ್ವಾತಂತ್ರ್ಯ ದೊರಕುವುದು ತಡವಾಯಿತು ಅನ್ನುವ ಒಂದು ವಾದವಿದೆ. ಆದರೆ ಕ್ರಾಂತಿಯಿಂದ ಸ್ವಾತಂತ್ರ್ಯವನ್ನು ಪಡೆದ ಪ್ರಪಂಚದ ಯಾವುದೇ ದೇಶ ದೀರ್ಘಕಾಲ ಸ್ವಾತಂತ್ರ್ಯವನ್ನು ಉಳಿಸಿಕೊಂಡ ಪುರಾವೆಗಳು ಇಲ್ಲ. ತಮ್ಮ ಸ್ವಾತಂತ್ರ್ಯವನ್ನು ಕಳಕೊಳ್ಳುತ್ತಿದ್ದವು ಅಥವಾ ಸರ್ವಾಧಿಕಾರದ ಹಿಡಿತಕ್ಕೆ ಒಳಗಾಗುತ್ತಿದ್ದವು. ಅದೇ ರೀತಿ ಸ್ಥಿತಿಯು ಭಾರತಕ್ಕೆ  ಆಗುತ್ತಿತ್ತು. ಕೇವಲ ಮೇಲ್ವರ್ಗದ ಜನರ ಕೈಯಲ್ಲಿದ್ದ ಸ್ವಾತಂತ್ರ್ಯ ಚಳವಳಿಯನ್ನು ತಮ್ಮ ಶಾಂತಿ ಹೋರಾಟದ ಮೂಲಕ ದೇಶದ ಸಾಮಾನ್ಯ ಜನರ ಮನೆ ಮನಗಳಿಗೆ ಗಾಂಧೀಜಿಯವರು ತಲುಪಿಸಿದರು.

ಗಾಂಧೀಜಿ ,ಬೋಸ್, ಭಗತ್ ಸಿಂಗ್ ಅವರೊಂದಿಗೆ ಸೈದ್ಧಾಂತಿಕ ಭಿನ್ನತೆ ಇತ್ತು. ವಿನಹ ವೈಯಕ್ತಿಕ ದ್ವೇಷ ಅಲ್ಲ ಬೋಸ್ ಭಗತ್ ಸಿಂಗ್ ಅವರು ರಾಜಕೀಯ ಸ್ವಾತಂತ್ರ್ಯವನ್ನು ಕ್ರಾಂತಿಯಲ್ಲಿ ಗಳಿಸಬಹುದು ಎಂದು ನಂಬಿದರೆ ಗಾಂಧೀಜಿ ಶಾಂತಿಯ ಮೂಲಕ ರಾಜಕೀಯ ಸ್ವಾತಂತ್ರ್ಯ ಮತ್ತು ನೈತಿಕ ಸ್ವಾತಂತ್ರ್ಯವನ್ನು ಗಳಿಸಬಹುದು ಅಂದುಕೊಂಡಿದ್ದರು. ಗಾಂಧೀಜಿ ಚಿಂತನೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಗಾಂಧಿಯನ್ನು ಓದದೆ ಏನನ್ನು ಓದಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ರವರು ಮಾತನಾಡುತ್ತಾ ದೇಶದೊಳಗೆ ಗಾಂಧೀಜಿ ಚಿಂತನೆಯನ್ನು ಎಷ್ಟೇ ಅವಮಾನಿಸಿದರೂ, ಗೋಡ್ಸೆಯನ್ನು ಎಷ್ಟೇ ವೈಭವೀಕರಿಸಿದರೂ ವಿದೇಶದ ನೆಲದಲ್ಲಿ ತಾನು ಗಾಂಧಿ ನೆಲದಿಂದ ಬಂದವನು ಎಂದು ಹೇಳದೆ ಇರಲು ಸಾಧ್ಯವಿಲ್ಲ. ಈ ದೇಶದ  ಜ್ಯಾತ್ಯಾತೀತೆಯ ಉಳಿವಿಗಾಗಿ, ಗಾಂಧೀಜಿಯವರ ಚಿಂತನೆಗಳನ್ನು  ದೇಶದ  ಯುವ  ಸಮುದಾಯ  ಹೆಚ್ಚು ಹೆಚ್ಚು ಓದಬೇಕು, ಅರ್ಥೈಸಿಕೊಳ್ಳಬೇಕು. ಹಿರಿಯರು ಗಾಂಧಿಯನ್ನ ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಮಾಡಬೇಕು ಎಂದರು.

ಪ್ರಾರಂಭದಲ್ಲಿ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ರಿಯಾಜ್ ಪಳ್ಳಿಯವರು ಸ್ವಾಗತಿಸಿದರು. ಮೈಕಲ್ ಡಿ ಸೋಜ ಅವರು ಮುಖ್ಯ ಭಾಷಣಕಾರರನ್ನು ಪರಿಚಯಿಸಿದರು. ಕೊನೆಯಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್  ಇದರ ಅಧ್ಯಕ್ಷರಾದ ಫ್ರೇಮ್ ಮಿನೇಜಸ್ ಅವರು ವಂದಿಸಿದರು. ಸ್ಟೀವನ್ ಕುಲಾಸೋ ಅವರು ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಭಾಷಣಕಾರರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.

Leave a Reply

Your email address will not be published. Required fields are marked *

error: Content is protected !!