ಚಪ್ಪಾಳೆ, ಹೂ ಮಳೆ ಬೇಡ ಜೀವನ ನಿರ್ವಹಿಸುವಷ್ಟು ವೇತನ ನೀಡಿ: ಕೊರೊನಾ ವಾರಿಯರ್ಸ್

ಉಡುಪಿ: ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಚಳುವಳಿಗೆ ಮೂರೂ ದಿನ ಕಳೆದರು ಸರಕಾರ ಯಾವುದೇ ಸ್ಪಂದಿಸಿಲ್ಲ, ಇದೀಗಾ ಹೋರಾಟ ಮಾಡಿದವರ ಮೇಲೆಯೇ ನೋಟಿಸ್ ಜಾರಿ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಇಲಾಖೆ ಬೆದರಿಕೆಯೊಡ್ಡುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಉಡುಪಿ ಜಿಲ್ಲೆಯ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದಿಂದ ನಡೆಸಲಾಗುತ್ತಿರುವ ಅಸಹಕಾರ ಚಳುವಳಿ (ಕೆಲಸ ಸ್ಥಗಿತ ಹೋರಾಟ) ಮೂರನೇ ದಿನ ಪೂರೈಸಿದೆ ಎಂದರು.

ಕೊರೊನಾ ವೈರಸ್ ಹಾವಳಿ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದರೂ ಸರಕಾರದಿಂದ ಒಳ್ಳೆಯ ವೇತನ ಸೌಲಭ್ಯ ಸಿಕ್ಕಿಲ್ಲ. ನಮಗೆ ಜನರ ಚಪ್ಪಾಳೆ ಬೇಡ, ಸರಕಾರ ಸೌಲಭ್ಯ ಕೊಡಲಿ. ಕಳೆದ 15 ವರ್ಷಗಳಿಂದ ಬೇರೆ ಸರಕಾರಗಳಿಗೆ ಬೇಡಿಕೆ ಪೂರೈಸುವಂತೆ ಮನವಿ ಮಾಡಿದ್ದೇವೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ವೈದ್ಯರ ಬೇಡಿಕೆಗಳು ಗುತ್ತಿಗೆ ಆಧಾರಿತ ನೌಕರರು ಎಂದರೆ ತಾತ್ಸಾರವೇ ಎಂದು ಪ್ರಶ್ನಿಸಿದರು.

ಸದ್ಯ ಪ್ರತಿಭಟನೆಯಿಂದಾಗಿ ಕೊರೊನಾ ತಪಾಸಣೆ, ಕೊರೊನಾ ಕಾಲ್ ಸೆಂಟರ್‌ಗಳು, ಕೊರೊನಾ ವರದಿ ಸಲ್ಲಿಸುವುದು, ಲಸಿಕಾ ಕಾರ್ಯಕ್ರಮ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ, ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ, ಅಂಧತ್ವ ಕಾರ್ಯಕ್ರಮ, ಒಳ ಮತ್ತು ಹೊರ ರೋಗಿಗಳ ತಪಾಸಣೆ, ಮಲೇರಿಯಾ ಮತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ ಮಾಡುವಲ್ಲಿ ನಮ್ಮ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ಹೊಣೆ ದೊಡ್ಡದು ಎಂದು ತಿಳಿಸಿದರು.

ಖಾಯಂ ಸ್ಟಾಫ್ ನರ್ಸ್‌ಗಳಿಗೆ 38,000 ರೂ. ವೇತನ ಸಿಗುತ್ತದೆ ಆದರೆ ಅಷ್ಟೇ ಕೆಲಸ ನಿರ್ವಹಿಸುವ ಗುತ್ತಿಗೆ ನೌಕರರಿಗೆ 10 ಸಾವಿರ ವೇತನ ಸಿಗುತ್ತದೆ. ನಮಗೆ ವೇತನ ಬಿಟ್ಟು ಬೇರೆ ಯಾವುದೇ ಭತ್ಯೆ ಸಿಗುತ್ತಿಲ್ಲ. ಸರಕಾರ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರ ಮೇಲೆ ತಾರತಮ್ಯ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು ಯಾವುದೇ ರಜೆ ತೆಗೆದುಕೊಳ್ಳದೆ ವಾರವಿಡೀ ದುಡಿದರೂ ನಮಗೆ ಸರಕಾರ ಚಪ್ಪಾಳೆ ಬಡಿಯಿರಿ, ಹೂ ಮಳೆ ಹಾಕಿ ಎಂದಿದ್ದಾರೆ, ನಮಗೆ ಅದೆಲ್ಲ ಏನೂ ಬೇಡಾ , ನಮಗೆ ಜೀವನ ಭದ್ರತೆಗೆ ಸಮಾನ ವೇತನ ನೀಡಿ ಎಂದು ಗೋಷ್ಠಿಯಲ್ಲಿ ತಮ್ಮ ನೋವನ್ನು ತೋಡಿಕೊಂಡರು.

ಈ ಸಂದರ್ಭ, ಗುರುರಾಜ್ ಗಂಗಾಣಿ, ಪ್ರದಾನ ಕಾರ್ಯದರ್ಶಿ, ಡಾ ರೇಷ್ಮಾ ಪೈ , ಮಹಿಳಾ ಘಟಕದ ಅಧ್ಯಕ್ಷೆ, ರೂಪಕ್ ನಾಗರಾಜ್, ಉಪಾಧ್ಯಕ್ಷರು, ಗಿರೀಶ್ ಕಡ್ಡಿಪುಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!