ಶಿರಾ, ಆರ್ ಆರ್ ನಗರ ಕ್ಷೇತ್ರದ ಉಪ ಚುನಾವಣೆ ಘೋಷಣೆ: ನವೆಂಬರ್ 3ರಂದು ಮತದಾನ
ಬೆಂಗಳೂರು: ರಾಜ್ಯದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಉಪ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ.
ದೇಶದ 56 ವಿಧಾನಸಭಾ ಕ್ಷೇತ್ರಗಳು, ಬಿಹಾರದ ಲೋಕಸಭೆಯ 1 ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ.
ರಾಜ್ಯದ ಎರಡು ವಿಧಾನ ಸಭಾ ಕ್ಷೇತ್ರಗಳಾದ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ನವೆಂಬರ್ 3ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9ರಂದು ಅಧಿಸೂಚನೆ ಹೊರಬೀಳಲಿದೆ.
ಅಕ್ಟೋಬರ್ 16ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಕ್ಟೋಬರ್ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಅಕ್ಟೋಬರ್ 19ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 3ರಂದು ರಾಜ್ಯ ಸೇರಿದಂತೆ 56 ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನ.10 ರಂದು ಮತ ಎಣಿಕೆ ನಡೆಯಲಿದೆ. ನ.12ಕ್ಕೆ ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿನಗರ, ಛತ್ತೀಸ್ ಗಡದ 1, ಗುಜರಾತ್ ನ 8, ಹರ್ಯಾಣದ 1, ಜಾರ್ಖಂಡ್ ನ 2, ಮಧ್ಯಪ್ರದೇಶದ 28, ಮಣಿಪುರದ 2, ನಾಗಲ್ಯಾಂಡ್ 2, ಒಡಿಸ್ಸಾದ 2, ತೆಲಂಗಾಣದ 1, ಉತ್ತರ ಪ್ರದೇಶದ 7 ವಿಧಾನಸಭಾ ಕ್ಷೇತ್ರಗಳ ಉಪ ಚುನಾವ ಣೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ.