ಕರ್ನಾಟಕ ಬಂದ್: ಜಲಾನಯನ ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆ, ಹಲವರು ಪೊಲೀಸ್ ವಶಕ್ಕೆ
ಬೆಂಗಳೂರು: ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳ ಜನರ ಜೀವನಾಡಿ ಕಾವೇರಿ ನೀರನ್ನು ರಾಜ್ಯದಲ್ಲಿ ತೀವ್ರ ಬರಗಾಲದ ಮಧ್ಯೆ ತಮಿಳು ನಾಡಿಗೆ ಹರಿಸುವುದನ್ನು ವಿರೋಧಿಸಿ ಇಂದು ಶುಕ್ರವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಳಗ್ಗೆಯಿಂದಲೇ ಪ್ರತಿಕ್ರಿಯೆ ಜೋರಾಗಿದೆ.
ರಾಜಧಾನಿ ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸರು ನಗರದ ಸೂಕ್ಷ್ಮ ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಾವಲಿಗೆ ಇಳಿದಿದ್ದಾರೆ. ಬೆಂಗಳೂರಿನ ವಾಣಿಜ್ಯ, ವ್ಯಾಪಾರ ಚಟುವಟಿಕೆಗಳ ಕೇಂದ್ರ ಭಾಗವಾಗಿರುವ ಕೆಆರ್ ಮಾರುಕಟ್ಟೆಯಲ್ಲಿ ವಿವಿಧ ಸಂಘಟನೆಗಳು ವಿಭಿನ್ನ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಿವಿಗೆ ಚೆಂಡು ಹಾಕಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುವುದಕ್ಕೆ ಅಲರ್ಟ್ ಆದ ಪೋಲಿಸರು, ಪ್ರತಿಭಟಿಸಿತ್ತಿದ್ದವರನ್ನ ಕೆಆರ್ ಮಾರುಕಟ್ಟೆಯಿಂದ ಹೊರ ಕಳುಹಿಸಿದರು.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲ ರೌಡಿಶೀಟರ್ಗಳು ಸೇರಿದಂತೆ 150 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 2016ರಲ್ಲಿ ಕಾವೇರಿ ನೀರಿಗಾಗಿ ಕರೆ ನೀಡಿದ್ದ ಬಂದ್ ವೇಳೆ ಕಲ್ಲುತೂರಿ, ಬೆಂಕಿ ಹಚ್ಚಿದ್ದ ಹಲವು ರೌಡಿಶೀಟರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿಎಂ ನಿವಾಸ ಬಳಿ ಬಿಗಿ ಭದ್ರತೆ: ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ದಾರಿಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸಂಜಯ್ ನಗರ ಸರ್ಕಲ್, ಆನಂದ್ ರಾವ್ ಸರ್ಕಲ್, ಆರ್.ಟಿ ನಗರದ ತರಳುಬಾಳು ಜಂಕ್ಷನ್ ಸೇರಿದಂತೆ ಐದಾರು ಕಡೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಎರಡು ಕೆಎಸ್ ಆರ್ಪಿ, ಕಾವೇರಿ ನಿವಾಸದ ಬಳಿ ಒಂದು ಬಿಎಂಟಿಸಿ ಬಸ್, ಒಂದು ಕೆಎಸ್ ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಇಂದು ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಂದ್‌ಗೆ ಕರೆ ನೀಡಿದ್ದು, ಇದಕ್ಕೆ ಹೆಚ್ಚಿನ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ರಾಜ್ಯ ರೈತ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರವಲ್ಲದೆ, ಜನಜೀವನದ ಮೇಲೆ ಪರಿಣಾಮ ಬೀರುವ ಬೀದಿಬದಿ ವ್ಯಾಪಾರ, ಹೊಟೆಲ್ ಸಂಘಟನೆ ಸಹಮತ ಘೋಷಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿವೆ.
ಕರ್ನಾಟಕ ಬಂದ್‌ನಿಂದ ಇಂದು ಕಾವೇರಿ ಜಲಾನಯನ ಜಿಲ್ಲೆಗಳಲ್ಲಿ ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದಾಗ್ಯೂ, ಬಂದ್ ರಾಜ್ಯದ ಇತರ ಜಿಲ್ಲೆಗಳ ಮೇಲೆ ಕಡಿಮೆ ಪರಿಣಾಮ ಬೀರಬಹುದು. ರಾಜ್ಯಾದ್ಯಂತ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಬಂದ್ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ರಾಜ್ಯ ರಾಜಧಾನಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಖಾಸಗಿ ಸಾರಿಗೆ ವಲಯವು ತನ್ನ ನೈತಿಕ ಬೆಂಬಲವನ್ನು ನೀಡಿದೆ. ಇದರಿಂದಾಗಿ ಕ್ಯಾಬ್‌ಗಳು ಮತ್ತು ಆಟೋರಿಕ್ಷಾಗಳ ಸೇವೆ ವ್ಯತ್ಯಯವಾಗಿದೆ. ಬಿಎಂಟಿಸಿ ಮತ್ತು ಮೆಟ್ರೋ ಎಂದಿನಂತೆ ತಮ್ಮ ಸೇವೆಗಳನ್ನು ನಿರ್ವಹಿಸಲಿವೆ. ಕಾರ್ಮಿಕ ಸಂಘಟನೆಗಳು ಬಂದ್ ಕರೆಗೆ ಬೆಂಬಲ ನೀಡಿರುವುದರಿಂದ ಅಂಗಡಿಗಳು, ಹೋಟೆಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಮುಚ್ಚುವ ಸಾಧ್ಯತೆಯಿದೆ.
ಬೆಂಗಳೂರು ನಗರ ಪೊಲೀಸರು ಗುರುವಾರ ಮಧ್ಯರಾತ್ರಿಯಿಂದ 24 ಗಂಟೆಗಳ ಕಾಲ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನಗರದಲ್ಲಿ ಮೆರವಣಿಗೆ, ರ್ಯಾಲಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ್ಯಾಲಿ ನಗರದಲ್ಲಿ ಒಟ್ಟು 60 ಕೆಎಸ್‌ಆರ್‌ಪಿ ಮತ್ತು 40 ಸಿಎಆರ್ ಪ್ಲಟೂನ್‌ಗಳು ಮತ್ತು ಎರಡು ಕ್ಷಿಪ್ರ ಕಾರ್ಯಪಡೆ ಕಂಪನಿಗಳನ್ನು ನಿಯೋಜಿಸಲಾಗಿದೆ. ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಬಂದ್‌ಗೆ ಕರೆ ನೀಡಿರುವ ‘ಕನ್ನಡ ಒಕ್ಕೂಟ’ದ ಅಧ್ಯಕ್ಷ ವಾಟಾಳ್ ನಾಗರಾಜ್, ಕಾರ್ಯಕರ್ತರು ಏನೇ ಬಂದರೂ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಮೆರವಣಿಗೆ ನಡೆಸಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ರೈಲುಗಳನ್ನು ನಿಲ್ಲಿಸಲಾಗುವುದು ಎಂದರು. ಚಿತ್ರರಂಗ ಬೆಂಬಲ ಘೋಷಿಸಿರುವುದರಿಂದ ಸ್ಟಾರ್ ನಟರು ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಬಿಜೆಪಿ, ಜೆಡಿಎಸ್ ಮತ್ತು ಎಎಪಿಯಂತಹ ರಾಜಕೀಯ ಪಕ್ಷಗಳು ಬಂದ್ ಕರೆಗೆ ಬೆಂಬಲ ನೀಡಿವೆ. ಕಾವೇರಿ ನದಿ ಪಾತ್ರದ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆಯಲಿವೆ. ಮೈಸೂರಿನಲ್ಲಿ ಹೊಟೇಲ್ ಉದ್ಯಮಿಗಳು ಮತ್ತು ಪ್ರವಾಸಿ ಸಂಘಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳು ಬಂದ್ ಕರೆಗೆ ಬೆಂಬಲ ನೀಡಿವೆ.
ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ಹೋರಾಟ ನಡೆಸಿರುವ ವ್ಯಾಪಾರಿಗಳು, ರೈತ ಸಂಘಟನೆಗಳು ಧಾರವಾಡ ಬಂದ್‌ಗೆ ಬೆಂಬಲ ಸೂಚಿಸಿವೆ. ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಬಂದ್ ಕರೆ ಕಡಿಮೆ ಅಥವಾ ಯಾವುದೇ ಪರಿಣಾಮ ಬೀರುವುದಿಲ್ಲ.
ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ, ರಾಜ್ಯ ಸರ್ಕಾರಕ್ಕೆ ನೀಡಿರುವ ಮೂರು ದಿನಗಳ ಗಡುವು ಇಂದು ಕೊನೆಯಾಗುತ್ತಿದೆ. ಸಮಿತಿ ಕಾರ್ಯಕರ್ತರು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೆದ್ದಾರಿ ತಡೆ ನಡೆಸಿ ಇಂದು ಸಿಎಂ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ.
ಏರ್ ಪೋರ್ಟ್ ಗೆ ಮುತ್ತಿಗೆ ಯತ್ನ, ಕರವೇ ಕಾರ್ಯಕರ್ತನ ಬಂಧನ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಮುಂಜಾನೆ ಕಾವೇರಿ ನೀರಿನಲ್ಲಿ ರಾಜ್ಯಕ್ಕೆ ಆದ ಅನ್ಯಾಯ ವಿರೋಧಿಸಿ, ಕರ್ನಾಟಕ ಬಂದ್ ಬೆಂಬಲಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅರೈವಲ್ ಗೇಟ್ ಬಳಿ ಜಮಾಯಿಸಿದ ಕರವೇ ಕಾರ್ಯಕರ್ತರು ಕಾವೇರಿ ನೀರು ಬಿಡದಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದು ಘೋಷಣೆ ಕೂಗಿದರು. ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ಹರಸಾಹಸ ಪಟ್ಟರು. 20ಕ್ಕೂ ಅಧಿಕ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಎಲ್ಲರನ್ನೂ ಕಾರುಗಳಲ್ಲಿ ತುಂಬಿಕೊಂಡು ಹೋದರು.
ಗಡಿಭಾಗದಲ್ಲಿ ತೀವ್ರ ಪ್ರತಿಭಟನೆ: ಅತ್ತಿಬೆಲೆ ಗಡಿಯಲ್ಲಿ ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ನೂರಾರು ಮಂದಿ ಜನರಿಂದ ಪ್ರತಿಭಟನಾ ಅತ್ತಿಬೆಲೆ ಟೋಲ್‌ನಿಂದ ಗಡಿ ಗೋಪುರದ ವರೆಗೆ ನಡೆಯಿತು. ಬಂದ್ ಯಶಸ್ವಿಗೊಳಿಸಬೇಕು ಎಂದು ಘೋಷಣೆ ಕೂಗಿ ಮೆರವಣಿಗೆ ನಡೆಸಿದರು.
ಕನ್ನಡ ಜಾಗೃತಿ ವೇದಿಕೆಯಿಂದಲೂ ಪ್ರತಿಭಟನೆ ನಡೆದಿದ್ದು, ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಅತ್ತಿಬೆಲೆ ಗಡಿಯಲ್ಲಿ ಹೈ ಆಲರ್ಟ್ ವಿಧಿಸಲಾಗಿದ್ದು, ಪೊಲೀಸರಿಂದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುಮಾರು ನೂರಕ್ಕೂ ಅಧಿಕ ಮಂದಿ ಪೊಲೀಸರ ನಿಯೋಜನೆಯಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.