ಸರಕಾರದಿಂದ ಉಡುಪಿ ಜಿಲ್ಲೆಯ ಕಡೆಗಣನೆ ಶಾಸಕರಿಂದ ಹತಾಶೆಯ ಹೇಳಿಕೆ: ಕೊಡವೂರು
ಉಡುಪಿ: ರಾಜ್ಯ ಸರಕಾರ ಉಡುಪಿ ಜಿಲ್ಲೆಯನ್ನು ಕಡೆಗಣಿಸಿದೆ ಎಂಬ ಉಡುಪಿ ಶಾಸಕ ಯಶಪಾಲ್ ಸುವರ್ಣರ ಹೇಳಿಕೆ ಬಾಲಿಷ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳು ಕಳೆದಿದೆ ಈ ಅವಧಿಯಲ್ಲಿ ಸರ್ವ ಜನರನ್ನು ತಲುಪುವ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನ್ನು ಈಗಾಗಲೇ ಕಾರ್ಯಗತಗೊಳಿಸಿದೆˌ ಪ್ರತಿ ಜಿಲ್ಲೆಗಳಿಗೂ ಅಭಿವೃದ್ಧಿಗಾಗಿ ಅನುದಾನಗಳನ್ನು ಹಂತ ಹಂತವಾಗಿ ಬಿಡುಗಡೆಗೊಳಿಸುತ್ತಿದೆ, ರಾಜ್ಯದಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರುಗಳ ನೇತೃತ್ವದಲ್ಲಿ ಜನರ ಸಮಸ್ಯೆಗಳನ್ನು ಸ್ಪಂದಿಸಲು ಜನತಾದರ್ಶನ ಏರ್ಪಡಿಸುತ್ತಿದೆ. ಉಸ್ತುವಾರಿ ಸಚಿವರು ಹಲವಾರು ಬಾರಿ ಉಡುಪಿಗೆ ಬಂದು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಹಾಗಾಗಿ ಸರಕಾರದಿಂದ ಜಿಲ್ಲೆಯ ಕಡೆಗಣನೆ ಎಂಬ ಹೇಳಿಕೆ ಹಾಸ್ಯಸ್ಪದ. ಶಾಸಕರು ಕೇವಲ ಮೂರು ತಿಂಗಳ ಮೊದಲ ತಮ್ಮ ಸರಕಾರದ ಕಾರ್ಯವೈಖರಿಯನ್ನು ಅವಲೋಕಿಸಲಿ ಇಲಾಖಾವಾರು ಅಭಿವೃದ್ಧಿಗೆ ಬಿಜೆಪಿ ಸರಕಾರ ಬಿಡುಗಡೆಗೊಳಿಸಿದ ಅನುದಾನ ಎಷ್ಟು? ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ತಮ್ಮ ಸರಕಾರ ಕೈಗೊಂಡ ಕ್ರಮಗಳನ್ನು ಪರಿಶೀಲಿಸಲಿˌ ಎಂದು ಸವಾಲು ಹಾಕಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿರಂತರ ಜಿಲ್ಲೆಯ ಭೇಟಿ,ˌ ಜನಸ್ಪಂದನˌ ಸರಕಾರಿ ಇಲಾಖೆಗಳಲ್ಲಿ ಕಡತಗಳ ತ್ವರಿತ ವಿಲವಾರಿಗೆ ಕ್ರಮ ˌಇವುಗಳಿಂದ ಶಾಸಕರು ಹತಾಶಗೊಂಡಂತೆ ಕಾಣುತ್ತಿದೆ. ಅವರು ಅಸಹಾಯಕತೆಯಿಂದ ಈ ಹೇಳಿಕೆ ನೀಡಿರಬಹುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಶಾಸಕ ಯಶಪಾಲ್ ಸುವರ್ಣರ ಹೇಳಿಕೆಗೆ ಪ್ರತಿಕ್ರಿಯೆಸಿದ್ದಾರೆ.