ಕಟ್ಟಡ ಸಾಮಾಗ್ರಿ ಸಾಗಾಟ ಬಂದ್ ಕರೆಗೆ ಸರ್ಕಾರವೇ ನೇರಹೊಣೆ : ಯಶ್ಪಾಲ್ ಸುವರ್ಣ ಆಕ್ರೋಶ
ಉಡುಪಿ: ರಾಜ್ಯ ಸರ್ಕಾರದ ದ್ವಂದ್ವ ನಿಲುವು, ರಾಜ್ಯದ ಯಾವುದೇ ಜಿಲ್ಲೆಯಲ್ಲಿಲ್ಲದ ನಿರ್ಬಂಧವನ್ನು ಉಡುಪಿ ಜಿಲ್ಲೆಯ ಲಾರಿ ಚಾಲಕ ಮಾಲಕರಿಗೆ ಹೇರುವ ಮೂಲಕ ಬಡ ಕೂಲಿ ಕಾರ್ಮಿಕರ ಹೊಟ್ಟೆಗೆ ಒಡೆಯಲು ಸರಕಾರ ಮುಂದಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗಣಿ, ಸಾರಿಗೆ ಇಲಾಖೆಯ ಅವೈಜ್ಞಾನಿಕ ನಿಯಮಾವಳಿಗಳ ಮೂಲಕ ಲಾರಿ ಮಾಲೀಕರಿಗೆ ಕಟ್ಟಡ ಸಾಮಾಗ್ರಿಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೇ ಬಂದ್ ಕರೆ ನೀಡುವ ಮೂಲಕ ಸರಕಾರದ ವೈಫಲ್ಯ ಬಯಲಾಗಿದೆ.
ಕಟ್ಟಡ ನಿರ್ಮಾಣ ಕ್ಷೇತ್ರವನ್ನೇ ಅವಲಂಬಿಸಿರುವ ಬಡ ಕಾರ್ಮಿಕರಿಗೆ ಹಾಗೂ ನಿರ್ಮಾಣ ಕ್ಷೇತ್ರದ ಹಲವಾರು ವ್ಯವಹಾರಗಳಿಗೆ ದೊಡ್ಡ ಹೊಡೆತ ನೀಡಲಿದೆ.
ಸದಾ 5 ಭಾಗ್ಯಗಳ ಬಗ್ಗೆಯೇ ಮಾತನಾಡುತ್ತಿರುವ ಸರಕಾರ ವರ್ಗಾವಣೆ ದಂಧೆ ಹಾಗೂ ಪಕ್ಷದ ಆಂತರಿಕ ಕಚ್ಚಾಟದಿಂದಾಗಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.
ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಮಾಜಿ ಸಚಿವರು, ಮಾಜಿ ಶಾಸಕರ ಭಿನ್ನ ನಿಲುವು, ಸ್ವಪ್ರತಿಷ್ಠೆಗಾಗಿ ಜಿಲ್ಲಾಡಳಿತವನ್ನು ಕೈಗೊಂಬೆಯಾಗಿಸುವ ಪ್ರಯತ್ನದ ಫಲವಾಗಿ ಜನತೆ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಕೂಡಲೇ ಈ ಅವೈಜ್ಞಾನಿಕ ನಿರ್ಬಂಧವನ್ನು ರದ್ದುಮಾಡಿ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಈ ಜನ ಸಾಮಾನ್ಯರ ಜೊತೆಗೂಡಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.