ದುಡಿಯುವ ಕೈಗಳ ಅನ್ನ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ- ಸುನಿಲ್ ಕುಮಾರ್ ಕಿಡಿ

ಕಾರ್ಕಳ: ಅಧಿಕಾರದ ಆಸೆಯಿಂದ ಪಂಚಗ್ಯಾರಂಟಿಗಳ ಆಮಿಷವೊಡ್ಡಿ ಜನರನ್ನು ದಾರಿತಪ್ಪಿಸಿ ಅಧಿಕಾರ ಹಿಡಿದ ಕಾಂಗ್ರೆಸ್ ಒಂದೆರಡು ಸಾವಿರ ಹಣ ನೀಡಿ ಲಕ್ಷಾಂತರ ದುಡಿಯುವ ಕೈಗಳ ಅನ್ನವನ್ನು ಕಿತ್ತುಕೊಂಡಿದೆ. ಜಿಲ್ಲೆಯಲ್ಲಿ ದುಡಿಯುವ ವರ್ಗಕ್ಕೆ ಆದ ಅನ್ಯಾಯಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ.

ಈ ತಕ್ಷಣವೇ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ತುರ್ತು ಸಭೆ ಕರೆದು ಸಮಸ್ಯೆ ನಿವಾರಿಸಬೇಕು ಎಂದು ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ವ್ಯವಸ್ಥೆಯನ್ನು ಕರಾವಳಿ ಜಿಲ್ಲೆಗೆ ಹೇರಲಾಗಿದೆ. ಜಿಲ್ಲೆಯ ಬಡ ಕಾರ್ಮಿಕರು, ದುಡಿಯುವ ವರ್ಗದ ಮೇಲೆ ಗದಾಪ್ರಹಾರ ನಡೆಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಕಲ್ಲು, ಮರಳು, ಮಣ್ಣು, ಕೆಂಪು ಕಲ್ಲು ಸಾಗಾಟ ನಿರ್ಬಂಧದಿಂದ ಇಡೀ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿದೆ.

ಕೆಂಪುಕಲ್ಲು, ಮರಳು, ಕಟ್ಟಡ ನಿರ್ಮಾಣ, ನಿರ್ಮಾಣದ ಸಾಮಗ್ರಿ ಸಹಿತ ಎಲ್ಲದರ ಸಾಗಾಟಕ್ಕೆ ನಿರ್ಬಂಧ, ಕಡಿವಾಣದಿಂದ ಬಡ ದುಡಿಯುವ ವರ್ಗದ ಹೊಟ್ಟೆಗೆ ಏಟು ಬಿದ್ದಿದೆ. ಸಾಲ-ಶೂಲ ಮಾಡಿ ನಿರ್ಮಾಣ, ಸಾಗಾಟ ಇನ್ನಿತರ ವ್ಯವಹಾರದಲ್ಲಿ ತೊಡಗಿಸಿಕೊಂಡ ಸಹಸ್ರಾರು ಮಂದಿಯ ಬದುಕು ಬೀದಿ ಪಾಲಾಗಿದೆ. ತನ್ನ ಪಾಡಿಗೆ ದುಡಿಯುತ್ತಾ ನೆಮ್ಮದಿಯಿಂದಿದ್ದ ಜಿಲ್ಲೆಯ ಬಡ ಸಾಮಾನ್ಯ ವರ್ಗಕ್ಕೆ ಸೇರಿದ ಹಲವರ ಬದುಕಿಗೆ ಕಾಂಗ್ರೆಸ್‌ನಿಂದ ಕತ್ತಲೆ ತರುವ ಕೆಲಸ ನಡೆದಿದೆ.

ಈ ನಿರ್ಬಂಧ ಮತ್ತು ಅವ್ಯವಸ್ಥೆಗೆ ಜಿಲ್ಲಾಡಳಿತವೇ ಹೊಣೆಗಾರರು ಎಂದು ದೂರಿದರು. ಜಿಲ್ಲಾಡಳಿತಕ್ಕೆ ಈ ಹಿಂದೆ ನಿರ್ಬಂಧ ಹೇರದೆ ತೆರವುಗೊಳಿಸುವಂತೆ ಮತ್ತು ಬಡ ದುಡಿಯುವ ವರ್ಗಕ್ಕೆ ಅನ್ಯಾಯ ಎಸಗದಂತೆ ತಾನು ಮನವಿ ನೀಡಿದ್ದೆ. ಆದರೆ ಯಾವುದೇ ಕ್ರಮವಹಿಸಿಲ್ಲ. ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಶ್ರಮ ಜೀವಿಗಳ ಕಷ್ಟದ ಅರಿವಿಲ್ಲ ಎನ್ನುವುದು ಮನದಟ್ಟಾಗುತ್ತಿದೆ. ಉಸ್ತುವಾರಿ ಸಚಿವರು ವಿಳಂಬಿಸದೆ ಈ ಕೂಡಲೆ ಶ್ರಮಿಕರ ನೆರವಿಗೆ ಮುಂದಾಗಬೇಕು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ, ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಹೇರಿದ ನಿರ್ಬಂಧವನ್ನು ತೆರವುಗೊಳಿಸಲು ಮುಂದಾಗಬೇಕು.

ಮುಂದಿನ ಮೂರ್ನಾಲ್ಕು ದಿನದೊಳಗೆ ನಿರ್ಬಂಧ ತೆರವು ಸಂಬಂಧ ಏನಾದರೊಂದು ನಿರ್ಧಾರಕ್ಕೆ ಬಂದಿಲ್ಲ ಎಂದಾದರೆ ಇಡೀ ಜಿಲ್ಲೆಯ ದುಡಿಯುವ ವರ್ಗದ ಜೊತೆ ಸೇರಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜನ ಬೀದಿಗಿಳಿಯುವ ಮೊದಲೆ ಎಚ್ಚೆತ್ತುಕೊಳ್ಳಿ ಎಂದು ಅವರು ಜಿಲ್ಲಾಡಳಿತಕ್ಕೆ ಹಾಗೂ ಉಸ್ತುವಾರಿ ಸಚಿವರಿಗೆ ಮಾಜಿ ಸಚಿವ, ಕಾರ್ಕಳ ಶಾಸಕ ವಿ.ಸುನಿಲ್ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!