ಅಧಿಕಾರಿಗಳ ಮೇಲೆ ಒತ್ತಡದಿಂದಲೇ ಪರಶುರಾಮನ ನಕಲಿ ಮೂರ್ತಿ ಪ್ರತಿಷ್ಠಾಪನೆ- ಸಚಿವೆ ಹೆಬ್ಬಾಳ್ಕರ್
ಕಾರ್ಕಳ, ಸೆ.23: ಎರ್ಲಪಾಡಿ ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ 14.42 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ ಕಂಡುಬಂದಿರುವ ಲೋಪದೋಷ ಗಳಿಗೆ ಅಧಿಕಾರಿಗಳ ಮೇಲಿದ್ದ ತೀವ್ರವಾದ ‘ಒತ್ತಡ’ವೇ ಕಾರಣ ಎಂಬುದನ್ನು ಅವರು ತಿಳಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಸಾರ್ವಜನಿಕರು ಹಾಗೂ ಪಕ್ಷೀಯರಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಇಂದು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಯೋಜನೆಯಲ್ಲಿ ಪಾಲ್ಗೊಂಡ ಇಲಾಖೆಗಳ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಯೋಜನೆಯಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ತೀವ್ರವಾದ ಒತ್ತಡವಿತ್ತು. ಒತ್ತಡದಲ್ಲಿ ಅವರು ಹೀಗೆ ಮಾಡಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ಈ ವಿಷಯವನ್ನು ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತಂದ್ದಿದ್ದೇವೆ ಎಂದವರು ಹೇಳಿದ್ದಾರೆ ಎಂದರು.
ಎಲ್ಲಾ ಪಾರ್ಟ್ ಬದಲಿಸಬೇಕು ಅಂದರೆ…: ಪಾರ್ಕ್‌ನಲ್ಲಿ ಪ್ರತಿಷ್ಠಾಪಿಸಿರುವ ಪರಶುರಾಮ ಮೂರ್ತಿ ಯನ್ನು ಬದಲಿಸುವ ಬಗ್ಗೆ ಕೇಳಿದಾಗ, ಅದರಲ್ಲಿ ಲೋಪವಾಗಿದೆ. ಸರಿಪಡಿಸಬೇಕು ಎಂದಿದ್ದಾರೆ. ಯಾವುದು ಮುಖವಾ.. ಕೈಯಾ.. ಇನ್ನೊಂದು ಪಾರ್ಟ್ ಬದಲಿಸಬೇಕಾ ಎಂದಾಗ ಎಲ್ಲವನ್ನೂ ಅಂದಿದ್ದಾರೆ. ಅದರರ್ಥವನ್ನು ನೀವೇ ತಿಳಿದುಕೊಳ್ಳಿ ಎಂದು ಸಚಿವೆ ನುಡಿದರೆ, ಹಾಗಿದ್ದರೆ ಮೂರ್ತಿ ನಕಲಿಯಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಅದನ್ನು ನೀವೆ ಈಗ ಅರ್ಥ ಮಾಡಿಕೊಂಡು ಹೇಳಿದಿರಲ್ಲಾ ಎಂದರು.
ನನ್ನ ಚಿಂತೆ ಅದಲ್ಲಾ. ಇದೊಂದು ಪ್ರೇಕ್ಷಣೀಯ ಸ್ಥಳವಾದ ಕಾರಣ, ಮಕ್ಕಳು ಸೇರಿದಂತೆ ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡುತಿದ್ದಾರೆ. ಅವರ ಸುರಕ್ಷತೆ ನನ್ನ ಕಾಳಜಿ. ನನಗೆ ರಾಜಕಾರಣ ಮಾಡುವುದಕ್ಕಿಂತ ಜನರ ಸುರಕ್ಷತೆ ಮುಖ್ಯ.ಎತ್ತರದ ಪ್ರದೇಶದಲ್ಲಿರುವುದ ರಿಂದ ಜೋರಾದ ಗಾಳಿ-ಮಳೆ ಬರುವಾಗ ಮೂರ್ತಿಯ ಸುಭದ್ರತೆಯನ್ನು ನೋಡಬೇಕು. ಇಲ್ಲಿ ಏನಾದರೂ ಅವಘಡಗಳಾದರೆ ಯಾರು ಹೊಣೆ ಎಂದವರು ಪ್ರಶ್ನಿಸಿದರು.
ಯೋಜನೆಯ ಬಗ್ಗೆ ಇಲಾಖೆಗಳಿಂದ ವರದಿಯನ್ನು ನೀಡುವಂತೆ ಸೂಚಿಸಿದ್ದೇನೆ. ಮೂರ್ತಿ ತಯಾರಿಸುತ್ತಿರು ವ ಬೆಂಗಳೂರಿನ ಸಂಸ್ಥೆಗೂ ನೋಟೀಸು ನೀಡಲು ಹೇಳಿದ್ದೇನೆ. ಅವರೊಂದಿಗೂ ಚರ್ಚಿಸುತ್ತೇವೆ ಎಂದ ಸಚಿವೆ, ಅಂದು ಸಮಯದ ಮಿತಿ ಹಾಗೂ ಅಧಿಕಾರಿಗಳ ಮೇಲಿದ್ದ ಒತ್ತಡ ದಿಂದ ಲೋಪಗಳಾಗಿವೆ ಎಂದರು.
ಇಡೀ ಯೋಜನೆಯಲ್ಲಿ ಆಗಿರುವ ಅಕ್ರಮ, ಅವ್ಯವಹಾರದ ಕುರಿತು ತನಿಖೆ ಮಾಡುತ್ತೀರಾ ಎಂದು ಕೇಳಿದಾಗ, ಅಗತ್ಯ ಬಿದ್ದರೆ ತನಿಖೆ ಮಾಡುತ್ತೇವೆ. ತಪ್ಪು ಕಂಡುಬಂದರೆ ಅವರ ವಿರುದ್ಧ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ನುಡಿದರು.
ಇಲ್ಲಿನ ಕೆಲಸವಿನ್ನೂ ಪೂರ್ಣಗೊಂಡಿಲ್ಲ. ನಾನು ಬಂದಿರುವುದು ಇದನ್ನು ವೀಕ್ಷಣೆ ಮಾಡಲು ಎಂದು ಅವರು ಮತ್ತೊಮ್ಮೆ ಪುನರುಚ್ಛರಿಸಿದರು.