ಸೌರ್ಹಾದತೆಗೆ ಸಾಕ್ಷಿಯಾದ ಕಿನ್ನಿಮೂಲ್ಕಿಯ ಸಾರ್ವಜನಿಕ ಗಣೇಶೋತ್ಸವ
ಉಡುಪಿ: ಜಿಲ್ಲೆಯಲ್ಲಿ ಗಣೇಶೋತ್ಸವ ಎಂದರೆ ಎಲ್ಲಾ ವರ್ಗದ ಜನರೂ ಜಾತಿ ಮತ ಭೇದವಿಲ್ಲದೆ ಶ್ರದ್ಧಾ ಭಕ್ತಿಯಿಂದ ಭಾಗವಹಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಿನ್ನಿಮೂಲ್ಕಿಯ ಕನ್ನರ್ಪಾಡಿಯ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆಯಲ್ಲಿ ಒಂದೇ ದಿನ ಸರ್ವ ಧರ್ಮ ಸಹಿಷ್ಣುತೆಯವ ಭಾಗವಾಗಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ಗಣೇಶ ವಿಗ್ರಹಕ್ಕೆ ವಿಶಿಷ್ಟವಾದ ಹೂವಿನಹಾರ ಸಮರ್ಪಿಸಿದ್ದಾರೆ.
ಕನ್ನರ್ಪಾಡಿಯ ಭಕ್ತರಾದ ಕೃಷ್ಣ ಸೇರಿಗಾರ್ ಗುಡ್ಡು ಮಲ್ಲಿಗೆ ಸಮರ್ಪಿಸಿದರೆ, ಕೆವಿನ್ ಜತ್ತನ್ನ ಅವರು ಗುಲಾಬಿ ಹಾರ ಸಮರ್ಪಿಸಿದರೆ, ಕಟಪಾಡಿ ಸಂಶುದ್ಧೀನ್ ಮಲ್ಲಿಗೆ ಹಾರ ಸಮರ್ಪಿಸಿ ಭಕ್ತಿ ಭಾವದಿಂದ ತಮ್ಮ ಇಷ್ಟ ಸಿದ್ದಿಗಾಗಿ ಬೇಡಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ, ಸಮಾಜ ಸೇವಕ ಕೆ. ಕೃಷ್ಣ ಮೂರ್ತಿ ಆಚಾರ್ಯ ಅವರು ಗಣೇಶೋತ್ಸವ ಸಮಿತಿಯ ಒಂದೇ ದಿನ ಸರ್ವಧರ್ಮದ ಭಕ್ತರು ಗಣಪತಿ ವಿಗ್ರಹಕ್ಕೆ ಹೂಹಾರ ಸಮರ್ಪಿಸಿದ್ದು ಜಿಲ್ಲೆಯಲ್ಲಿ ಸೌಹಾರ್ದ ರೀತಿಯಲ್ಲಿ ಜನರು ಇರುವುದಕ್ಕೆ ಇದುವೇ ಸಾಕ್ಷಿ. ಕೆಲವೊಂದು ಸಮಾಜ ವಿರೋಧಿಗಳ ಪ್ರೇರಣೆಯಿಂದ ಜಿಲ್ಲೆಗೆ ಕಪ್ಪು ಚುಕ್ಕೆ ಕೆಲಸ ಮಾಡಿ ಜನರ ನಡುವೆ ವೈಮನಸ್ಸು ತರಿಸುತ್ತಾರೆ.
ಇಂತಹ ಗಣೇಶೋತ್ಸವ ಆಚರಣೆಯಲ್ಲೇ ನಾಡಿನಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣವಾಗಿ ಜನ ನೆಮ್ಮದಿಯ ಜೀವನ ಸಾಗಿಸುವಂತಾಗಬೇಕೆಂದರು.