ಡಯಾಲಿಸೀಸ್ ಘಟಕದ ಅವ್ಯವಸ್ಥೆ: ಸರಕಾರದ ಬಳಿ ಹಣವಿಲ್ಲದಿದ್ದರೆ ಭಿಕ್ಷೆ ಎತ್ತಿಯಾದರೂ ಹಣ ಕೊಡುತ್ತೇವೆ- ಕರವೇ
ಉಡುಪಿ, ಸೆ.23: ಜಿಲ್ಲಾಸ್ಪತ್ರೆ ಡಯಾಲಿಸೀಸ್ ಘಟಕದಲ್ಲಿ ಅವ್ಯವಸ್ಥೆ ಎದುರಾಗಿದ್ದು, ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆ ಸರಿಪಡಿಸಲು ಸರಕಾರದ ಬಳಿ ಹಣವಿಲ್ಲದಿದ್ದರೆ ಭಿಕ್ಷೆ ಎತ್ತಿಯಾದರೂ ಹಣ ಕೊಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿಬಣ) ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಆಸ್ಪತ್ರೆಯಲ್ಲಿ ಕಳೆದ ಬಾರಿಯೂ ಅವ್ಯವಸ್ಥೆ ಎದುರಾದಾಗ ಅಹೋರಾತ್ರಿ ಹೋರಾಟ ಮಾಡಿದ್ದೆವು. ಈ ಬಾರಿಯೂ ಮತ್ತೆ ಸಮಸ್ಯೆ ಎದುರಾಗಿದ್ದು, ರಾಜ್ಯ ಸರಕಾರ, ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆ ಡಯಾಲಿಸೀಸ್ ವ್ಯವಸ್ಥೆ ಸಮಸ್ಯೆಯನ್ನು ಮೂರು ದಿನದ ಒಳಗೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕವಾಗಿ ಭಿಕ್ಷೆ ಎತ್ತಿ ಸಂಗ್ರಹಗೊಂಡ ಹಣವನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಕೇಂದ್ರೀಯ ವಿದ್ಯಾಲಯ ಯೋಜನೆಯನ್ನು ವ್ಯವಸ್ಥಿತವಾಗಿ ಹಳ್ಳ ಹಿಡಿಸುವ ಕೆಲಸ ನಡೆಯುತ್ತಿದೆ. ಮಣಿಪಾಲದ ಪ್ರಗತಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಯನ್ನು ಅಲ್ಲಿನ ಡಂಪಿಂಗ್‌ಯಾರ್ಡ್ ಸಮೀಪ ಸ್ವಂತ ಕಟ್ಟಡ ನಿರ್ಮಿಸಿ, ಅಲ್ಲಿಗೆ ಶಾಲೆಯನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಮನುಷ್ಯರು ಮೂಗು ಹಿಡಿದುಕೊಳ್ಳದೆ ನಿಲ್ಲಲೂ ಆಗದ ಜಾಗಕ್ಕೆ ಶಾಲೆಯ ಸ್ಥಳಾಂತರಕ್ಕೆ ನಮ್ಮ ವಿರೋಧವಿದೆ. ಮಕ್ಕಳ ಆರೋಗ್ಯವನ್ನು ಕೇಂದ್ರ, ರಾಜ್ಯ ಸರಕಾರ ಕಡೆಗಣಿಸಿ ಈ ಕೆಲಸಕ್ಕೆ ಮುಂದಾಗಿದೆ. ಶುದ್ಧ ಪರಿಸರ ಹೊಂದಿರುವ ಬೇರೆ ಜಾಗದಲ್ಲಿ ಶಾಲೆಯ ಸ್ವಂತ ಕಟ್ಟಡ ರ್ಮಿಸಬೇಕು ಎಂದು ಒತ್ತಾಯಿಸಿದರು.
ಕರವೇ ಮುಖಂಡರಾದ ಸುಧೀರ್ ಪೂಜಾರಿ, ಗ್ಲಾಕ್ಸನ್ ಜತ್ತನ್ನ ಸೂರಜ್ ಪೂಜಾರಿ, ಡ್ಯಾನಿ, ಶಾಹಿಲ್ ರೆಹಮತುಲ್ಲಾ ಪತ್ರಿಕಾಗೋಷ್ಠಿಯಲ್ಲಿದ್ದರು.