ಉಡುಪಿ: ಆಫ್ರಿಕನ್ ದೇಶಗಳಿಗೆ ಸೌರ ವಿದ್ಯುತ್ ಕಾರ್ಯಗಾರ ನೀಡುತ್ತಿರುವ ಸೆಲ್ಕೋ
ಉಡುಪಿ, ಸೆ.23: ತಂತ್ರಜ್ಞಾನ ಹಾಗೂ ಸೌರವಿದ್ಯುತ್ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಗಿಂತ ಸುಮಾರು ಎರಡು ದಶಕಗಳಷ್ಟು ಹಿಂದಿರುವ ಮೂರು ಆಫ್ರಿಕನ್ ದೇಶಗಳಾದ ಇಥಿಯೋಪಿಯಾ, ಸಿಯೆರಾ ಲಿಯೋನ್ ಹಾಗೂ ತಾಂಜೆನಿಯಾ ದೇಶಗಳ 11 ಸೌರ ಶಕ್ತಿ ಆಧಾರಿತ ಉದ್ಯಮಸಂಸ್ಥೆಗಳ ಅಧಿಕಾರಿಗಳಿಗೆ ಭಾರತದ ಸೆಲ್ಕೋ ಫೌಂಡೇಷನ್ ಹತ್ತು ದಿನಗಳ ಉದ್ಯಮ ಆಧಾರಿತ ಕಾರ್ಯಾಗಾರವನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಆವರಣದಲ್ಲಿ ಹಮ್ಮಿಕೊಂಡಿದೆ.
ಸೆಲ್ಕೋ ಫೌಂಡೇಶನ್ ಮತ್ತು ಗ್ಲೋಬಲ್ ಎಸ್‌ಡಿಜಿ 7 ಹಬ್ಸ್ ಜಂಟಿಯಾಗಿ ಈ 10 ದಿನಗಳ ಉದ್ಯಮ ಆಧಾರಿತ ತರಬೇತಿ, ನೆಟ್‌ವರ್ಕಿಂಗ್ ಮತ್ತು ಸ್ಥಳೀಯವಾಗಿರುವ ಸೆಲ್ಕೋದ ಪ್ರಯೋಗತಾಣಗಳಿಗೆ ಭೇಟಿ ಕಾರ್ಯಕ್ರಮಗಳು ನಡೆಯಲಿದೆ. ಮೂರು ದೇಶಗಳ 11 ಸೌರಶಕ್ತಿ ಆಧಾರಿತ ಕಂಪೆನಿಗಳ 30ಕ್ಕೂ ಅಧಿಕ ಮಂದಿ ತಂತ್ರಜ್ಞರು ಇದರಲ್ಲಿ ಪಾಲ್ಗೊಂಡಿದ್ದಾರೆ.
ಗ್ಲೋಬಲ್ ಎಸ್‌ಡಿಜಿ 7 ಹಬ್ಸ್ ಹಿಂದುಳಿದ ದೇಶಗಳಲ್ಲಿ ಸುಸ್ಥಿರ ಇಂಧನ ತಂತ್ರಜ್ಞಾನದ ಅಳವಡಿಕೆ ಮೂಲಕ ಹಿಂದುಳಿದ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದು ಭಾರತದಲ್ಲಿ ಸೌರವಿದ್ಯುತ್ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿ ಅನುಭವ ಹೊಂದಿರುವ ಸೆಲ್ಕೋ ಫೌಂಡೇಷನ್‌ನ ನೆರವಿನಿಂದ ತಂತ್ರಜ್ಞಾನ ಜ್ಞಾನಗಳ ವಿನಿಮಯ, ಸಾಮರ್ಥ್ಯ ಬೆಳವಣಿಗೆ ಹಾಗೂ ಅನುಷ್ಠಾನದ ಮೂಲಕ ವೇಗವರ್ಧಕವಾಗಿ ಕೆಲಸ ಮಾಡುತ್ತಿದೆ. ಇದರ ಸಹಾಯದಿಂದ ಅರೋಗ್ಯ, ಜೀವನೋಪಾಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಆ ದೇಶಗಳ ಪ್ರಗತಿ ಸಾಧಿಸಲು ಉತ್ತೇಜನ ನೀಡುತ್ತಿದೆ ಎಂದು ಸೆಲ್ಕೋದ ಸೀನಿಯರ್ ಪ್ರೋಗ್ರಾಮ್ ಅಧಿಕಾರಿ ಪ್ರಶಾಂತ್ ತಿಳಿಸಿದರು.
ಭಾರತ ಮತ್ತು ಆಫ್ರಿಕಾದ ನಡುವೆ ಸೌರ ಶಕ್ತಿ ಆಧಾರಿತ ಉದ್ಯಮ ಮತ್ತು ವ್ಯಾಪಾರದ ವಿನಿಮಯವನ್ನು ಹೆಚ್ಚಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದರೊಂದಿಗೆ ಭಾರತ ಮತ್ತು ಆಫ್ರಿಕಾದ ಇಂಧನ ಆಧಾರಿತ ಉದ್ಯಮಗಳಿಂದ ಅನೇಕ ವಾಣಿಜ್ಯೋದ್ಯಮಿಗಳು ಭೇಟಿ ಮಾಡಿ ಶುದ್ಧ ಇಂಧನ ಸಂಬಂಧಿತ ಅನುಭವಗಳ ವಿನಿಮಯ ಮಾಡಿಕೊಳ್ಳುತಿದ್ದಾರೆ. ಪರಸ್ಪರ ವಿನಿಮಯದ ಮೂಲಕ ಸಂಭಾವ್ಯ ಪಾಲುದಾರಿಕೆಯನ್ನು ಸೃಷ್ಟಿಸುವ ಉದ್ದೇಶವೂ ಇದೆ ಎಂದರು.
ಪತ್ರಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಇಥಿಯೋಪಿಯಾದ ಲಿಮಿ ಅಶಿಫಾ ಮೊಚಾ, ತಾರಿಕು ಲಿಮಿ ತೂಲ್ಸಾ, ಅಬೆಲ್ ಜೆರ್ಫೂ, ತಾಂಜಾನಿಯಾದ ಸಿಲಾಯೋ ಆನೆಸ್ಟ್ ಮಥಾಯಸ್, ಸೆಲಿಮನ್ ಅಬ್ದುಲ್ಲಝೀಝ್ ರಶೀದ್ ಹಾಗೂ ಸಿಯೆರಾ ಲಿಯೋನ್‌ನ ಪ್ಯಾಟ್ರಿಕ್ ಮುಹಮ್ಮದ್ ಕಮರಾ, ಅಬ್ದುಲ್ ರಝಾಕ್ ಕೊಂಟೆಕ್, ಯೂಸಿಫ್ ಕಮರಾ ಭಾಗವಹಿಸಿ ತಮ್ಮ ದೇಶದ ಸ್ಥಿತಿ-ಗತಿಗಳ ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯ 14 ಆರೋಗ್ಯ ಕೇಂದ್ರಗಳು ಸಂಪೂರ್ಣ ಸೋಲಾರ್
ಜಿಲ್ಲೆಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೆಲ್ಕೋ ಈಗಾಗಲೇ 14 ಪಿಎಚ್‌ಸಿ ಗಳಲ್ಲಿ ಸಂಪೂರ್ಣ ಸೋಲಾರ್ ವಿದ್ಯುತ್‌ನ್ನು ಅಳವಡಿಸಿದೆ. ಹಾಗೂ 11 ಪಿಎಚ್‌ಸಿಗಳಲ್ಲಿ ಸೋಲಾರ್ ಅಳವಡಿಸುವ ಕಾರ್ಯ ಈ ತಿಂಗಳು ಮುಕ್ತಾಯ ಗೊಳ್ಳಲಿದೆ ಎಂದು ಸೆಲ್ಕೊದ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಇಲಾಖೆ ಹಸಿರು ನಿಶಾನೆ ತೋರಿಸಿದರೆ ಮುಂದಿನ ಅಕ್ಟೋಬರ್ ಒಳಗೆ ಇನ್ನುಳಿದ 36 ಪಿಎಚ್‌ಸಿಗಳನ್ನು ಸಂಪೂರ್ಣ ಸೋಲಾರ್ ವ್ಯವಸ್ಥೆಯಡಿ ತರಲಾಗುವುದು ಎಂದವರು ತಿಳಿಸಿದರು. ಇದರಿಂದ ಪ್ರತಿ ಪಿಎಚ್‌ಸಿಯ ತಿಂಗಳ ವಿದ್ಯುತ್ ಬಿಲ್‌ನಲ್ಲಿ 4000ದಿಂದ 5000ರೂ. ಉಳಿತಾಯವಾಗಲಿದೆ ಎಂದು ಗುರುಪ್ರಕಾಶ್ ಶೆಟ್ಟಿ ತಿಳಿಸಿದರು.