ಅನೈತಿಕ ಪೊಲೀಸ್‌ಗಿರಿ ಆರೋಪಿಗಳ ಬಂಧನಕ್ಕೆ ಜಯನ್ ಮಲ್ಪೆ ಆಗ್ರಹ

ಉಡುಪಿ: ತಿಂಗಳ ಹಿಂದೆ ಆಗುಂಬೆಯ ಸಿರಿಮನೆ ಫಾಲ್ಸ್‌ಗೆ ಹೋಗಿದ್ದ ಉಡುಪಿ ಮೂಲದ ಅನ್ಯಕೋಮಿನ ಜೋಡಿಯನ್ನು ತಡೆದು ಅವ್ಯಾಚ ಪದಗಳಿಂದ ನಿಂದಿಸಿ,ಹಲ್ಲೆಗೆ ಮುಂದಾಗಿದಲ್ಲೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.

ಸಂಸ್ಕೃತಿ ರಕ್ಷಕರ ಹೆಸರಿನಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಸಿರುವ ಈ ತಂಡದ ಯುವಕರ ಕಾಲಿಗೆ ಬಿದ್ದು, ನಮ್ಮ ಮನೆಯ ಮಾನ ಕಾಪಾಡಿ ಎಂದು ಬೇಡಿ ಕೊಂಡರೂ, ಬಿಡದೆ ಹಲ್ಲೆಗೆ ಮುಂದಾಗಿ ವಿಡಿಯೋ ಮಾಡಿ ಸಾಮಾಜಿಕಜಾಲತಾಣದಲ್ಲಿ ವೈರಲ್ ಮಾಡಿರುವ ದುಷ್ಕರ್ಮಿಗಳ ವರ್ತನೆ ಖಂಡನೀಯ.
ನಿರ್ದಿಷ್ಟ ಬಣ್ಣದ ಶಾಲು ಹಾಕಿಕೊಂಡು ಅನೈತಿಕ ಪೊಲೀಸ್‌ಗಿರಿಯಲ್ಲಿ ಭಾಗವಹಿಸುವ ಈ ತಂಡ, ವಾಹನಗಳನ್ನು ತಡೆದು ಯಾರು?ಯಾರ ಜೊತೆಗೆ? ಎಲ್ಲಿಗೆ? ಯಾಕೆ ಬಂದಿದ್ದು ಎಂದು ಯುವ ಜೋಡಿಗಳ ಮೇಲೆ ದೌರ್ಜನ್ಯ ಎಸಗಲು ಸಂಘಪರಿವಾರಕ್ಕೆ ಅಧಿಕೃತ ಪರವಾನಿಗೆಯನ್ನು ಕೊಟ್ಟವರು ಯಾರು?ಎಂದು ಪ್ರಶ್ನಿಸಿರುವ ಜಯನ್ ಮಲ್ಪೆ ಕಳೆದ ಹಲವು ವರ್ಷಗಳಿಂದ ಪೊಲೀಸರು ಮತ್ತು ಸಂಘಪರಿವಾರದ ನಡುವಿನ ಅನೈತಿಕ ಸಂಬಂಧವೇ ಇಂತಹ ಘಟನೆ ಹೆಚ್ಚಾಗಲು ಕಾರಣ ಎಂದು ಆರೋಪಿಸಿದ್ದಾರೆ.

ಕರಾವಳಿ ಮತ್ತು ಮಳೆನಾಡಿನ ಭಾಗಗಳಲ್ಲಿ ಕಾನೂನು ವ್ಯವಸ್ಥೆಯ ನಿಯಂತ್ರಣ ಹೀಗೆ ದುಷ್ಕರ್ಮಿಗಳ ಕೈವಶದಲ್ಲಿದ್ದು, ನಾಗರೀಕ ಸಮಾಜದ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದ್ದರೂ ಸರಕಾರ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ದುರಂತ. ಈ ಘಟನೆಯಿಂದಾದರೂ ಪೊಲೀಸ್ ಇಲಾಖೆ ತಮ್ಮ ಹೊಣೆಗಾರಿಕೆ ಅರಿತು,ಕಾರ್ಯನಿರ್ವಹಿಸಿ ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗಿರುವ ದುಷ್ಕರ್ಮಿಗಳನ್ನು ತಕ್ಷಣ ಬಂದಿಸಿ ಕಾನೂನುಕ್ರಮ ಕೈಗೊಳ್ಳುವಂತೆ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!