ಉಡುಪಿ: ಸೆ.24 ರಂದು ಮೊಂಟೆಕ್‌ಸಿಂಗ್ ಅಹ್ಲುವಾಲಿಯಾ ಉಪನ್ಯಾಸ
ಉಡುಪಿ, ಸೆ.22: ದೇಶದ ಹಿರಿಯ ಅರ್ಥಶಾಸ್ತ್ರಜ್ಞರೂ, ಯೋಜನಾ ಆಯೋಗದ ಕೊನೆಯ ಉಪಾಧ್ಯಕ್ಷರೂ, ಭಾರತದಲ್ಲಿ ಆರ್ಥಿಕ ಉದಾರೀಕರಣದ ರೂವಾರಿಗಳಲ್ಲಿ ಒಬ್ಬರೂ ಆಗಿರುವ ಮೊಂಟೆಕ್‌ಸಿಂಗ್ ಅಹ್ಲೂವಾಲಿಯಾ ಅವರು ಸೆ.24ರ ರವಿವಾರ ಅಪರಾಹ್ನ 3 ಗಂಟೆಗೆ ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ತಲ್ಲೂರು ನುಡಿಮಾಲೆ- 2023ರಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕರಾಗಿರುವ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ, ಲೇಖಕ, ಅಂಕಣಕಾರ ರಾಜಾರಾಮ್ ತಲ್ಲೂರು ಈ ವಿಷಯ ತಿಳಿಸಿದ್ದಾರೆ.
ಮೊಂಟೆಕ್‌ಸಿಂಗ್ ಅಹ್ಲೂವಾಲಿಯಾ ಅವರು ‘ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿಗೆ ಹೊಸ ಸವಾಲುಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ಕೊನೆಯಲ್ಲಿ ನಾಡಿನ ಇನ್ನೊಬ್ಬ ಹಿರಿಯ ಅರ್ಥಶಾಸ್ತ್ರಜ್ಞರಾಗಿ ರುವ ಬೆಂಗಳೂರಿನ ಐಐಎಂಬಿ ಯ ಪ್ರೊ.ಎಂ.ಎಸ್.ಶ್ರೀರಾಮ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.
ಕುಂದಾಪುರದ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ‘ಕರಾವಳಿ ಕಟ್ಟು’ ಚಟುವಟಿಕೆಗಳ ಭಾಗವಾಗಿ ಈ ಕಾರ್ಯಕ್ರಮ ನಡೆಯು ತಿದ್ದು, ಇದರಲ್ಲಿ ಮೊಂಟೆಕ್‌ಸಿಂಗ್ ಅಹ್ಲೂವಾಲಿಯಾ ಅವರು ಬರೆದ ‘ಬ್ಯಾಕ್‌ಸ್ಟೇಜ್’ ಕೃತಿಯ ಕನ್ನಡ ಅನುವಾದ ‘ಎಂ.ಡಾಕ್ಯುಮೆಂಟ್’ ಪುಸ್ತಕವನ್ನು ಅಹ್ಲೂವಾಲಿಯಾ ಅವರೇ ಸ್ವತಹ ಬಿಡುಗಡೆಗೊಳಿಸಲಿದ್ದಾರೆ. ಕೃತಿಯನ್ನು ಪತ್ರ ಕರ್ತರೂ ಆಗಿರುವ ರಾಜಾರಾಮ್ ತಲ್ಲೂರು ಅವರೇ ಕನ್ನಡಕ್ಕೆ ಅನುವಾದಿಸಿದ್ದು, ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ ಎಂದು ಕರಾವಳಿಕಟ್ಟು ಸಂಘಟಕ, ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೇಖಕ, ಪತ್ರಕರ್ತ ಸಂವರ್ಥ ಸಾಹಿತ್ ಉಪಸ್ಥಿತರಿದ್ದರು.