ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಗುರುವಾರ 11 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಸರ್ವಾನುಮತದಿಂದ ಅಂಗೀಕಾರವಾಗಿದೆ.
ಈ ಮಸೂದೆ ಲೋಕಸಭೆಯಲ್ಲಿ ಬುಧವಾರ ಅಂಗೀಕಾರವಾಗಿತ್ತು. ಮಸೂದೆ ಪರವಾಗಿ 454 ಹಾಗೂ ಮಸೂದೆ ವಿರುದ್ಧವಾಗಿ 2 ಮತಗಳು ಚಲಾವಣೆಯಾಗಿದ್ದವು. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗುವುದರೊಂದಿಗೆ ಸಂಸತ್ತಿನಲ್ಲಿ ಹಾಗೂ ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಕಾನೂನುನ ಪ್ರಕಾರ ಲಭ್ಯವಾಗಲಿದೆ.
ಈ ಮಸೂದೆ ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡನೆಯ ಬಳಿಕ ಅನುಷ್ಠಾನಗೊಳ್ಳಲಿದೆ. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕರಿಸಿದ ಬಳಿಕ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್, ‘‘ಇದು ಐತಿಹಾಸಿಕ ಸಾಧನೆ, ಅಭಿನಂದನೆಗಳು, ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವಾಗಿರುವುದು ಕಾಕತಾಳೀಯವಾಗಿದೆ’’ ಎಂದರು.
ನೂತನ ಸಂಸತ್ ಭವನದಲ್ಲಿ ಅಂಗೀಕಾರವಾಗುತ್ತಿರುವ ಮೊದಲನೆ ಮಸೂದೆ ಇದಾಗಿದೆ.