‘ಕೌನ್ ಬನೇಗಾ ಕರೋಡಪತಿ’ ಹೆಸರಿನಲ್ಲಿ ಮಹಿಳೆಗೆ 12.93 ಲಕ್ಷ ರೂ. ಪಂಗನಾಮ
ಮಂಗಳೂರು, ಸೆ.21: ʼಕೌನ್ ಬನೇಗಾ ಕರೋಡಪತಿʼ ಎಂಬ ಕಾರ್ಯಕ್ರಮ ಹೆಸರಿನಲ್ಲಿ ಅಪರಿಚಿತನೊಬ್ಬ ಪುತ್ತೂರಿನ ಮಹಿಳೆಗೆ 12,93,200 ರೂ. ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ಪುತ್ತೂರು ಚಿಕ್ಕಮುಡ್ನೂರು ಗ್ರಾಮ ನಿವಾಸಿ ಝೀನತ್ ಬಾನು ಹಣ ಕಳೆದುಕೊಂಡವರು.
2022ನೇ ಮೇ ತಿಂಗಳಲ್ಲಿ ಅಪರಿಚಿತನೋರ್ವ ವಾಟ್ಸ್‌ಆ್ಯಪ್ ಕರೆ ಮಾಡಿ ‘ನಾನು ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಿಂದ ಕರೆ ಮಾಡುತ್ತಿದ್ದು ನೀವು 25 ಲಕ್ಷ ರೂ. ಲಾಟರಿ ಗೆದ್ದಿದ್ದೀರಿ. ಆ ಹಣವನ್ನು ಪಡೆಯಲು ತೆರಿಗೆ ಮತ್ತಿತರ ಶುಲ್ಕ ಪಾವತಿಸ ಬೇಕಾಗಿದೆ’ ಎಂದು ಹೇಳಿರುವುದಾಗಿ ಝೀನತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತನಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಿಂದ 2022 ಮೇ ತಿಂಗಳಿನಿಂದ 2023 ಸೆ.13 ರವರೆಗಿನ ಅವಧಿಯಲ್ಲಿ ಅಪರಿಚಿತ ವ್ಯಕ್ತಿಯು ಸುಮಾರು ರೂ. 12,93,200 ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಝೀನತ್ ಪೊಲೀಸರಿಗೆ ತಿಳಿಸಿದ್ದಾರೆ.
ವಂಚನೆಗೊಳಗಾಗಿರುವ ಮಹಿಳೆ ನೀಡಿರುವ ದೂರಿನಂತೆ ಐಟಿ ಕಾಯಿದೆ 66(ಡಿ) ಮತ್ತು ಐಪಿಸಿ ಕಲಂ 417 ಹಾಗೂ 420 ಅಡಿಯಲ್ಲಿ ದ.ಕ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.