ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸೀಸ್ ಕೇಂದ್ರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ
ಉಡುಪಿ: ಜಿಲ್ಲಾಸ್ಪತ್ರೆಯಲ್ಲಿನ ಡಯಾಲಿಸೀಸ್ ಕೇಂದ್ರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಗುರುವಾರ ಸಂಜೆ ಭೇಟಿ ನೀಡಿ, ರೋಗಿಗಳ ಮತ್ತು ಸಿಬ್ಬಂದಿಗಳ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು.
ಪ್ರತಿನಿತ್ಯ ಡಯಾಲೀಸ್ ಕೇಂದ್ರಕ್ಕೆ 20 ರಿಂದ 25 ರೋಗಿಗಳು ಆಗಮಿಸುತ್ತಾರೆ. ಅವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಿಬ್ಬಂದಿಗಳು ತಮ್ಮ ಸಮಸ್ಯೆಯನ್ನು ಶಾಸಕರಿಗೆ ಮನವರಿಕೆ ಮಾಡಿದರು. ಡಯಾಲೀಸ್ ಯಂತ್ರಗಳು ಕಾರ್ಯನಿರ್ವಹಿಸದೇ ಇರುವುದರಿಂದ 4 ಗಂಟೆಯ ಚಿಕಿತ್ಸೆಯನ್ನು ಮೂರು ಗಂಟೆಗೆ ಮೊಟಕುಗೊಳಿಸಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಉಡುಪಿಯ ಬಡ ರೋಗಿಗಳ ಜೊತೆ ಯಾರು ಚೆಲ್ಲಾಟವಾಡಬೇಡಿ. 4ಗಂಟೆಯ ಚಿಕಿತ್ಸೆಯನ್ನು ಪೂರ್ಣ ಪ್ರಮಾಣದಲ್ಲಿ ನೀಡಿ ಎಂದು ತಾಕೀತು ಮಾಡಿದರು.
ಈಗಾಗಲೇ ಖಾಸಗಿ ಆಸ್ಪತ್ರೆಗಳಾದ ಟಿ.ಎಮ್.ಎ ಪೈ ಮತ್ತು ಆದರ್ಶ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಸೇವೆಯನ್ನು ನೀಡಲು ಮಾತನಾಡಿದ್ದು, ಕಡಿಮೆ ದರದಲ್ಲಿ ಸೇವೆ ನೀಡಲು ಒಪ್ಪಿದ್ದಾರೆ. ಅಜ್ಜರಕಾಡು ಆಸ್ಪತ್ರೆಯ ಡಯಾಲಿಸೀಸ್ ಕೇಂದ್ರಕ್ಕೆ ಬರುವ ರೋಗಿಗಳ ಪಟ್ಟಿಯನ್ನು ಮಾಡಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ. ಉಡುಪಿ ನಗರ ಭಾಗದವರಿಗೆ ರಾತ್ರಿ ವೇಳೆಯಲ್ಲಿ, ದೂರದ ಊರಿನವರಿಗೆ ಬೆಳಗ್ಗಿನ ಅವಧಿಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸಿ, ಜೊತೆಗೆ ಇಲ್ಲಿನ ಸಿಬ್ಬಂದಿಗಳು ಎರಡು ಆಸ್ಪತ್ರೆಗೆ ಭೇಟಿ ನೀಡಿ, ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ನಂತರ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಯಶ್ಪಾಲ್, ಈಗಾಗಲೇ ಖಾಸಗಿ ಆಸ್ಪತ್ರೆಯೊಂದಿಗೆ ಸಭೆ ನಡೆಸಿ, ಚಿಕಿತ್ಸೆ ನೀಡಲು ಒಪ್ಪಿಸಲಾಗಿದೆ. ನಾನು ಹಾಗು ನನ್ನ ಸ್ನೇಹಿತರು ಖಾಸಗಿ ಆಸ್ಪತ್ರೆಯ ವೆಚ್ಚವನ್ನು ಭರಿಸಲಿದ್ದೇವೆ. ರಾಜ್ಯ ಸರಕಾರ ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸಿ, ಬಡ ರೋಗಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಬಿಟ್ಟಿ ಭಾಗ್ಯಗಳನ್ನು ನೀಡುವ ಸಿದ್ದರಾಮಯ್ಯನವರ ಸರಕಾರ ಉಡುಪಿ ಬಡ ರೋಗಿಗಳಿಗೆ ಉಚಿತವಾಗಿ ನೋವಿನ ಭಾಗ್ಯವನ್ನು ನೀಡುತ್ತಿದೆ. 15 ದಿನದೊಳಗೆ ಸೂಕ್ತ ಸ್ಪಂದನೆ ದೊರಕದೇ ಇದ್ದಲ್ಲಿ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.