ಮೋದಿ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರೆನಿಸುವುದು ಸುಯೋಗ: ಕುಯಿಲಾಡಿ
ಉಡುಪಿ: ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ‘ಪ್ರಧಾನಿ ಮೋದಿ ಸಾಧನೆಗಳ ಪ್ರದರ್ಶಿನಿ’ಗೆ ಚಾಲನೆ
ಉಡುಪಿ: ದೇಶ ಕಂಡ ಅಪ್ರತಿಮ ದೇಶಭಕ್ತ, ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಬಿಜೆಪಿ ಕಾರ್ಯಕರ್ತರೆನಿಸುವು ದು ಸುಯೋಗ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ‘ಸೇವಾ ಪಾಕ್ಷಿಕ ಅಭಿಯಾನ’ದ ಅಂಗವಾಗಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಆಯೋಜಿಸಲಾದ ಪ್ರಧಾನಿ ನರೇಂದ್ರ ಮೋದಿಯವರ 9 ವರ್ಷಗಳ ಸಾಧನೆಗಳ ಪ್ರದರ್ಶಿನಿಗೆ ಚಾಲನೆ ನೀಡಿ ಮಾತನಾಡಿದರು.
ಒಂದು ಕಾಲದಲ್ಲಿ ಹಾವಾಡಿಗರ ದೇಶ ಎಂಬ ಅಪಹಾಸ್ಯಕ್ಕೆ ಒಳಗಾಗಿದ್ದ ಭಾರತವನ್ನು ವಿಶ್ವ ಭೂಪಟದಲ್ಲಿ ಎದ್ದು ಕಾಣುವಂತೆ ಮಾಡಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ಇಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳ ನಾಯಕರು ಪ್ರಧಾನಿ ಮೋದಿಯ ವರ ಬೇಟಿಗೆ ಹಾತೊರೆಯುವ ಸ್ಥಿತಿ ನಿರ್ಮಾಣವಾಗಿದೆ. ‘ಸಬ್ ಕೇ ಸಬ್ ಕಾ ವಿಕಾಸ್’ ತತ್ವದಡಿ ಅಭಿವೃದ್ಧಿ ಪರ ಆಡಳಿತ ಮತ್ತು ಜನ ಪರ ವಿನೂತನ ಯೋಜನೆಗಳ ಅನುಷ್ಠಾನದ ಮೂಲಕ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವನ್ನು ಸೆ.17ರಂದು ಜಿಲ್ಲೆಯಾದ್ಯಂತ ಸೇವಾ ಕಾರ್ಯಗಳ ಜೊತೆಗೆ ಆಚರಿಸಲಾಗಿದೆ. ಇದು ವ್ಯಕ್ತಿ ಪೂಜೆ ಅಲ್ಲ, ವ್ಯಕ್ತಿತ್ವದ ಪೂಜೆ ಎಂದರು.
ಪ್ರಧಾನಿ ಮೋದಿಯವರ 9 ವರ್ಷಗಳ ಆಡಳಿತಾವಧಿಯ ವಿಶಿಷ್ಟ ಸಾಧನೆಗಳ ಪ್ರದರ್ಶಿನಿ ಮುಖೇನ ಮೋದಿಯವರ ಉತ್ತಮ ಕೆಲಸ ಕಾರ್ಯಗಳನ್ನು ತಳ ಮಟ್ಟದಲ್ಲಿ ಗುರುತಿಸುವ ಕಾರ್ಯ ಆಗಬೇಕು. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿ ಪಕ್ಷದ ಕಾರ್ಯಕರ್ತರಿಗೆ ಇನ್ನಷ್ಟು ಸ್ಪೂರ್ತಿ ನೀಡುವ ಜೊತೆಗೆ ಹೊಸ ಕಾರ್ಯಕರ್ತರಿಗೆ ಪ್ರೇರಣೆ ತುಂಬಲಿ. ಸೇವಾ ಪಾಕ್ಷಿಕ ಅಭಿಯಾನ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಹಾಗೂ ಪ್ರದರ್ಶಿನಿಯ ಸಂಯೋಜಕ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಪ್ರಮುಖರಾದ ರಾಘವೇಂದ್ರ ಉಪ್ಪೂರು, ಪಾಂಡುರಂಗ ಲಾಗ್ವಾಂಕರ್, ನವೀನ್ ಎಸ್.ಕೆ., ಮಂಜುನಾಥ್ ಮಣಿಪಾಲ್, ಗೋಪಾಲಕೃಷ್ಣ ರಾವ್ ಮಟ್ಟು, ನಿತಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.