ಕೋಟ್ಯಾಂತರ ರೂ. ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಖರೀದಿಸಿದ್ದ ಕಾರು, ಮನೆ, ಸೈಟು, 2 ಕೋಟಿ ರೂ. ಎಫ್‌ಡಿ ಜಪ್ತಿ

ಬೆಂಗಳೂರು: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಅವರಿಂದ ಕೋಟಿ ಕೋಟಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಿಂದುತ್ವವಾದಿ ಚೈತ್ರಾ ಕುಂದಾಪುರ ಅವರು ಇತ್ತೀಚಿಗೆ ಖರೀದಿಸಿದ್ದ ಕಿಯಾ ಕೇರೆನ್ಸ್ ಕಾರು, ಮನೆ, ಸೈಟು ಹಾಗೂ ಎರಡು ಕೋಟಿ ರೂಪಾಯಿ ಎಫ್ ಡಿ ಹಣವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ವಂಚನೆ ಹಣದಲ್ಲಿ ಖರೀದಿ ಮಾಡಿದ್ದ ಕಿಯಾ ಕಾರನ್ನು ಸಿಸಿಬಿ ಪೊಲೀಸರು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಚೈತ್ರಾ ಬ್ಯಾಂಕ್‌ನಲ್ಲಿಟ್ಟಿದ್ದ ಹಣ, ಖರೀದಿ ಮಾಡಿದ್ದ ಚಿನ್ನಾಭರಣವನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ನಿಲ್ಲಿಸಿದ್ದ ಚೈತ್ರಾ ಅವರ ಕಾರನ್ನು ಅವರ ಸ್ನೇಹಿತ ಎಂದು ಹೇಳಲಾಗುವ ಕಿರಣ್‌ ಎನ್ನುವವರು ಸೆ. 9 ರಂದು ಮುಧೋಳಕ್ಕೆ ತಂದಿದ್ದರು. ಕಿರಣ್ ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರು ತಂದು ತನ್ನ ಡ್ರೈವಿಂಗ್ ಸ್ಕೂಲ್‍ನಲ್ಲಿಟ್ಟುಕೊಂಡಿದ್ದರು. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸೌಟ್ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್ ವಶಕ್ಕೆ ಪಡೆದು ಕಾರು ಜಪ್ತಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ನು ಚೈತ್ರಾ ಕುಂದಾಪುರ ಅವರಿಗೆ ಸೇರಿದ್ದ 3 ಕೋಟಿ ರೂ. ಮೌಲ್ಯದ ಸ್ವತ್ತನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಚೈತ್ರಾ ಮತ್ತು ಶ್ರೀಕಾಂತ್‌ ಹೆಸರಲ್ಲಿ ಎಫ್.ಡಿ ಇಟ್ಟಿದ್ದ 1.8 ಕೋಟಿ ರೂ. ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. 

ಸ್ಥಳೀಯ ಉಪ್ಪೂರಿನ ಸೊಸೈಟಿಯಲ್ಲಿದ್ದ 40ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ವಂಚನೆಯ ಹಣದಲ್ಲಿ ಖರೀದಿ ಮಾಡಿದ್ದ 65 ಲಕ್ಷ ರೂ. ಮೊತ್ತದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಆಸ್ತಿ ಖರೀದಿ ಮಾಡಿದ ಬಗ್ಗೆ ಮಾಹಿತಿಯಿದ್ದು, ಅದನ್ನೂ ವಿಡಿಯೋ ಮಾಡುವ ಮೂಲಕ ಸರ್ಕಾರಿ ವ್ಯಾಪ್ತಿಗೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!