ಖಾಸಗಿ ಆಸ್ಪತ್ರೆಗಳ ಲಾಬಿಯೇ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆಗೆ ನಿರ್ಮಾಣಕ್ಕೆ ತೊಡಕು- ಜಿ.ಎ.ಕೋಟೆಯಾರ್

ಉಡುಪಿ, ಸೆ.16: ಕೇಂದ್ರ ಸರಕಾರವು ಕಾರ್ಮಿಕ ವಿಮಾ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ನೂರು ಹಾಸಿಗೆಯ ಸೂಪರ್ ಸ್ಪೆಶಾಲಿಟಿ ಇಎಸ್‌ ಐ ಆಸ್ಪತ್ರೆ ನಿರ್ಮಿಸಲು ಕಾನೂನುನಾತ್ಮಕ ಒಪ್ಪಿಗೆ ನೀಡಿ ಹಣದ ವ್ಯವಸ್ಥೆಯನ್ನು ಮಾಡಿದೆ. ಆದರೆ ಇದೆಲ್ಲ ನಡೆದು ಇಂದಿಗೆ ಮೂರು ವರ್ಷಗಳೇ ಕಳೆದರೂ ಖಾಸಗಿ ಆಸ್ಪತ್ರೆಗಳ ಲಾಬಿ ಹಾಗೂ ರಾಜಕಾರಣಿಗಳ ಪ್ರಭಾವದಿಂದ ಈವರೆಗೆ ಯಾವುದೇ ರೀತಿಯಲ್ಲೂ ಆಸ್ಪತ್ರೆಗೆ ಅಡಿಪಾಯ ಹಾಕಿಲ್ಲ ಎಂದು ದಿ ಕಾಮನ್ ಪೀಪಲ್ಸ್ ವೆಲ್ಫೇರ್ ಫೌಂಡೇಶನ್‌ ನ ರಾಷ್ಟ್ರೀಯ ಅಧ್ಯಕ್ಷ ಜಿ.ಎ.ಕೋಟೆಯಾರ್ ಆರೋಪಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ ದಿ ಕಾಮನ್ ಪೀಪಲ್ಸ್ ವೆಲ್ಪೇರ್ ಫೌಂಡೇಶನ್ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಹಮ್ಮಿಕೊಂಡಿರುವ ಒಂದು ದಿನದ ಉಪವಾಸ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು.

ಉಡುಪಿ ಜಿಲ್ಲೆಗೆ ಮಂಜೂರಾಗಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕೂಡಲೇ ಪ್ರಾರಂಭಿಸಬೇಕು. ಕಾರ್ಮಿಕ ವಿಮಾ ಯೋಜನೆಯಲ್ಲಿ ಹಣದ ಕೊರತೆ ಇಲ್ಲ. ಈಗಾಗಲೇ ಶೇ.40ಗಿಂತ ಹೆಚ್ಚು ಹಣ ಇಎಸ್‌ ಐ ಕಾರ್ಪೊರೇಶನ್‌ನಲ್ಲಿ ಕೊಳೆಯುತ್ತಿದೆ. ಆದುದರಿಂದ ಈ ಆಸ್ಪತ್ರೆಗೆ ಸರಕಾರ ಅನುದಾನ ಬಿಡುಗಡೆ ಮಾಡಬೇಕಾಗಿಲ್ಲ ಎಂದು ಅವರು ತಿಳಿಸಿದರು.

ಇಎಸ್‌ ಐ ಕಾನೂನಿನ ಪ್ರಕಾರ 60ಸಾವಿರಕ್ಕಿಂತ ಹೆಚ್ಚು ಇಎಸ್‌ಐ ಸದಸ್ಯರಿದ್ದ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಿಸಲೇ ಬೇಕು. ಆದರೆ ಉಡುಪಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕಾರ್ಮಿಕರು ವಿಮಾ ಯೋಜನೆಯ ಸದಸ್ಯರಾಗಿದ್ದಾರೆ. ಅದೇ ರೀತಿ ಸುಮಾರು 5 ಲಕ್ಷದ ವರೆಗೆ ಫಲಾನುಭವಿಗಳಿದ್ದಾರೆ. ಆದುದರಿಂದ ಕಾನೂನಾತ್ಮಕವಾಗಿ ಉಡುಪಿ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಆಗಲೇ ಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಸಂಘಟನೆಯ ಮಹಿಳಾ ಅಧ್ಯಕ್ಷೆ ಗೀತಾ ಪೂಜಾರಿ, ಪ್ರಮುಖರಾದ ಪ್ರವೀಣ್ ಕುಮಾರ್, ಮುಹಮ್ಮದ್, ಕಮಲಾಕ್ಷ, ಸುರೇಶ್ ಭಂಡಾರಿ, ಅಶೋಕ್ ತೋನ್ಸೆ, ಜಯ ಪೂಜಾರಿ, ಪವಿತ್ರಾ, ಸರಿತಾ, ಜ್ಯೋತಿ, ಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಕಾರ್ಕಳ, ಮಣಿಪಾಲ, ಕುಂದಾಪುರ ಹಾಗೂ ಉಡುಪಿಯಲ್ಲಿ ನಾಲ್ಕು ಇಎಸ್‌ಐ ಡಿಸ್ಪೆನ್ಸರಿಗಳನ್ನು ಸ್ಥಾಪಿಸಬೇಕು. ಅಲ್ಲದೆ ಇದಕ್ಕೆ ಬೇಕಾದ ವೈದ್ಯರನ್ನು ನೇಮಕ ಮಾಡಬೇಕು. ಅಲ್ಲದೆ ಅವರಿಗೆ ಕಾನೂನಾತ್ಮಕವಾದ ವೇತನವನ್ನು ಕೊಡಬೇಕು ಮತ್ತು ಅವರಿಗೆ ಖಾಸಗಿ ಕ್ಲಿನಿಕ್ ತೆರೆಯಲು ಅವಕಾಶ ನೀಡಬಾರದು. ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಬಾರದು ಎಂದು ಕೋಟೆಯಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!