ಆಯೋಗದಿಂದ ಮಕ್ಕಳ ಸಹಿತ ಎಲ್ಲರಿಗೂ ಒಳ್ಳೇಯದಾಗ ಬೇಕು: ಜಯಪ್ರಕಾಶ ಹೆಗ್ಡೆ

ಹೆಬ್ರಿ: ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಮಕ್ಕಳು, ಅನಾಥರು, ಹಳ್ಳಿಯವರು ಸಹಿತ ಎಲ್ಲರಿಗೂ ಉತ್ತಮ ಅವಕಾಶ ಸೌಲಭ್ಯಗಳು ದೊರೆತು ಎಲ್ಲರಿಗೂ ಒಳ್ಳೇಯದಾಗ ಬೇಕು, ಮೀಸಲಾತಿಯಿಂದ ಎಲ್ಲರಿಗೂ ಸಮಾನತೆ ದೊರೆಯಬೇಕು. ಆಗ ಮಾತ್ರ ಸರ್ವಜನಾಂಗದ ಶಾಂತಿಯ ತೋಟವಾಗಿ ಸಮ ಸಮಾಜದ ನಿರ್ಮಾಣ ಆಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ನಡೆದ ಹಿಂದುಳಿದ ವರ್ಗಗಳ ಸ್ಥಿತಿಗತಿ – ಅಂದು ಇಂದು ಸಂವಾದ – ವಿಶೇಷ ಹೊಂಬೆಳಕು ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗ ಎಲ್ಲರೂ ಮೀಸಲಾತಿಯನ್ನು ಕೇಳುತ್ತಿದ್ದಾರೆ ಎಲ್ಲರಿಗೂ ಒಳ್ಳೇಯದಾಗುವ ರೀತಿಯಲ್ಲಿ ಗ್ರಾಮಗ್ರಾಮಕ್ಕೆ ಹೋಗಿ ಸಮಗ್ರ ಅಧ್ಯಯನ ಮಾಡಲಾಗಿದೆ, ನಿರ್ಗತಿಕರು, ಅನಾಥರು, ಅವಕಾಶ ವಂಚಿತರನ್ನು ಮುಖ್ಯವಾಹಿನಿಗೆ ತರಲು ವಿಶೇಷ ಆದ್ಯತೆಯನ್ನು ನೀಡುತ್ತೇನೆ, ಕ್ರಿಮೇಲೇಶನ್‌ ವ್ಯವಸ್ಥೆಯಿಂದ ಹಲವರಿಗೆ ಜಾತಿ ಪ್ರಮಾಣಪತ್ರ ದೊರೆಯದೆ ಸಮಸ್ಯೆ ಎದುರಿಸುವಂತಾಗಿದೆ, ಅದಕ್ಕಾಗಿ ಅಂತವರಿಗೆ ಜಾತಿ ಪ್ರಮಾಣಪತ್ರ ನೀಡಲು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಜಯಪ್ರಕಾಶ ಹೆಗ್ಡೆ ಅವರು ತಿಳಿಸಿದರು. ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ನಾವು ಜೀವನದಲ್ಲಿ ಸಾಧನೆ ಮಾಡಬೇಕು, ಆ ಮೂಲಕ ದೇಶದ ಆರ್ಥಿಕತೆಯ ಸುಧಾರಣೆಗೆ ಕೊಡುಗೆ ನೀಡಬೇಕು, ಅವಕಾಶವನ್ನು ಹುಡುಕಿ ಬಳಸಿಕೊಂಡು ಜೀವನ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಾವು ಎಂದೂ ಸ್ಪರ್ಧೆಯಲ್ಲಿ ಹಿಂದುಳಿಯಬಾರದು, ನಾವೇ ಕಷ್ಟಪಟ್ಟು ಸಾಧನೆ ಮಾಡಬೇಕು, ಆಗ ನಮ್ಮ ಆರ್ಥಿಕತೆ ಸುಧಾರಣೆಯಾಗುತ್ತದೆ, ಅದೇ ದೇಶಕ್ಕೆ ದೊಡ್ಡ ಕೊಡುಗೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ದೇಶ ಒಮ್ಮೇಲೆ ದೊಡ್ಡ ಸಾಧನೆ ಮಾಡಿಲ್ಲ. ಹಂತಹಂತವಾಗಿ 70ವರ್ಷಗಳಿಂದ ವಿವಿಧ ಸಾಧನೆಗಳ ಮೂಲಕ ವಿಶ್ವದಶಕ್ತಿಯುತದೇಶವಾಗಿಹೊರಹೊಮ್ಮಿದೆ ಎಂದು ನೆನಪಿಸಿದರು. ಯುವ ಸಮುದಾಯದಿಂದ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯವಿದೆ, ಯುವ ಸಮುದಾಯ ಸ್ಪಷ್ಟವಾದ ಗುರಿಯನ್ನು ಇಷ್ಟುಕೊಂಡು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಸ್ಥಾನವನ್ನು ಪಡೆದು ಅತ್ಯುತ್ತಮ ಆಡಳಿತ ನಡೆಸಿ ರಾಜ್ಯ ದೇಶವನ್ನು ಮುನ್ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಮ್ಮ ಬದುಕು ಇತರರಿಗೆ ಪ್ರೇರಣೆಯಾಗಬೇಕು, ಎಲ್ಲಾ ಕ್ಷೇತ್ರಗಳಲ್ಲೂ ನಾವು ಎಚ್ಚರಿಕೆಯ ನಡೆಯಲ್ಲಿ ನಮ್ಮ ಬದುಕನ್ನು ನಾವೇ ಕಟ್ಟಿಕೊಂಡು ಸದೃಡ ಸಮಸಮಾಜದ ನಿರ್ಮಾಣ ಮಾಡಬೇಕು ಎಂದು ಹೆಗ್ಡೆ ಹೇಳಿದರು.

ಶಿಕ್ಷಣದಿಂದ ನಮ್ಮ ಬದುಕು ಉನ್ನತ ಮಟ್ಟಕ್ಕೆ ಏರುತ್ತದೆ, ಅವಕಾಶಗಳು ಮತ್ತು ಅತ್ಯುತ್ತಮ ಸಂಪರ್ಕಗಳು ನಮಗೆ ಅತ್ಯುನ್ನತ ಜ್ಞಾನವನ್ನು ನೀಡುತ್ತದೆ, ಆದರ ಜೊತೆಗೆ ನಾವೇ ಸಮಧರ್ಮ ಸಮಭಾವದ ಸಮಾಜವನ್ನು ನಿರ್ಮಾಣ ಮಾಡಬೇಕಿದೆ ಎಂದರು. ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಆಚಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯದಲ್ಲಿ ಅವಕಾಶ ವಂಚಿತರೆಲ್ಲರಿಗೂ ನ್ಯಾಯ ದೊರಕಿಸಿಕೊಟ್ಟ ಜನನಾಯಕ ಜಯಪ್ರಕಾಶ ಹೆಗ್ಡೆ ಅವರ ಬದುಕು ಎಲ್ಲರಿಗೂ ಪ್ರೇರಣೆ, ಪರಿಶ್ರಮಕ್ಕಿಂತ ಪರ್ಯಾಯ ಮಾರ್ಗ ಬೇರೆ ಇಲ್ಲ, ಪರಿಶ್ರಮದ ಮೂಲಕ ಉನ್ನತ ಸ್ಥಾನಕ್ಕೇರಿ ಜನರ ಸೇವೆ ಮಾಡುವ ಜಯಪ್ರಕಾಶ ಹೆಗ್ಡೆ ಅವರು ಮಾದರಿ ಎಂದು ಅಭಿನಂದಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೊಂದಿಗೆ ಜಯ ಪ್ರಕಾಶ ಹೆಗ್ಡೆ ಅವರು ಕಾಲೇಜಿನಲ್ಲಿ ನಡೆಸಿ ಕೊಟ್ಟರು. ರಚನಾ ಶೆಟ್ಟಿ, ಪೂರ್ಣಾಕರ್‌, ನೂರ್‌ ಅಹಮದ್‌, ಬಬಿತಾ, ಯೋಗಿಕಾ, ಜ್ಯೋತಿ, ಗಗನ್‌, ರಾಜೇಶ್ರೀ, ಪ್ರಜ್ಞಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಾನಾಧಿಕಾರಿ ವಿಶ್ವೇಶ್ವರ ಎನ್.‌ ಗಾಂವ್ಕರ್‌, ಕಾಲೇಜಿನ ಐಕ್ಯೂಎಸಿ ಸಂಚಾಲಕ ಉಮೇಶ್‌ ಬಿ.ಎಂ, ಉಪನ್ಯಾಸಕರು, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಕೋಕಿಲಾ ಎಚ್ ಎಸ್‌ ನಿರೂಪಿಸಿ, ದತ್ತ ಕುಮಾರ್‌ ವಂದಿಸಿದರು.


Leave a Reply

Your email address will not be published. Required fields are marked *

error: Content is protected !!