ಉಡುಪಿ ಜಿಲ್ಲೆಯಲ್ಲಿ ESI ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಸೆ.16 ರಂದು ಉಪವಾಸ ಸತ್ಯಾಗ್ರಹ

ಉಡುಪಿ, ಸೆ.14: ಜಿಲ್ಲೆಯಲ್ಲಿ ಕಾರ್ಮಿಕರ ವಿವಿಧ ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಿರುವ ದಿ ಕಾಮನ್ ಪೀಪಲ್ ವೆಲ್ಫೇರ್ ಫೌಂಡೇಶನ್‌ನ ಪ್ರಯತ್ನಗಳಿಂದ 2021ರಲ್ಲಿ ಕೇಂದ್ರ ಸರಕಾರ ಉಡುಪಿ ಜಿಲ್ಲೆಗೆ ಕಾರ್ಮಿಕ ವಿಮಾ ಯೋಜನೆಯಡಿ 100 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಷೋಷಿಸಿದ್ದರೂ, 2ವರ್ಷ ಕಳೆದರೂ ಯಾವುದೇ ಕೆಲಸ ಪ್ರಾರಂಭಗೊಳ್ಳದಿರುವುದನ್ನು ಖಂಡಿಸಿ ಫೌಂಡೇಷನ್‌ನ ಅಧ್ಯಕ್ಷ ಗೋಪಾಲಯ್ಯ ಅಪ್ಪು ಕೋಟೆಯಾರ್ ಅವರು ಸೆ.16ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಕೋಟೆಯಾರ್ ಅವರು ಈ ವಿಷಯ ಪ್ರಕಟಿಸಿದರು. ಕಾರ್ಮಿಕ ವಿಮಾ ಯೋಜನೆಯಡಿಯಲ್ಲಿ ಉಡುಪಿಗೆ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಫೌಂಡೇಷನ್ 2016ರಿಂದ ಸತತ ಹೋರಾಟ ನಡೆಸಿ ಕೊಂಡು ಬಂದಿದೆ. ಬೆಂಗಳೂರಿನಿಂದ ಹೊಸದಿಲ್ಲಿ ಯವರೆಗೆ ಸತತ ಪತ್ರ ಚಳವಳಿ ನಡೆಸಿದೆ. ಇದರ ಪರಿಣಾಮ 2021ರಲ್ಲಿ ಉಡುಪಿ ಜಿಲ್ಲೆಗೆ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಸ್ಥಾಪನೆಗೆ ಕಾನೂನಾತ್ಮಕ ಮಂಜೂರಾತಿ ನೀಡಿದ್ದು, ಬೇಕಾದ ಹಣದ ವ್ಯವಸ್ಥೆಯನ್ನು ಕಾರ್ಮಿಕ ವಿಮಾ ಯೋಜನೆಯಡಿ ಮಾಡಿತ್ತು ಎಂದವರು ಹೇಳಿದರು.

ಆದರೆ ಈ ಘೋಷಣೆಯಾಗಿ ಇಂದಿಗೆ ಎರಡು ವರ್ಷ ಕಳೆದಿದ್ದರೂ ಆಸ್ಪತ್ರೆಗೆ ಜಾಗವೇ ಅಂತಿಮಗೊಂಡಿಲ್ಲ. ಹೀಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆಯೇ ನಡೆದಿಲ್ಲ ಎಂದರು. ಈ ಬಗ್ಗೆ ಫೌಂಡೇಷನ್ ಈ ವರ್ಷದ ಜನವರಿ ತಿಂಗಳಿನಿಂದ ಕೇಂದ್ರ ಕಾರ್ಮಿಕ ಇಲಾಖೆಗೆ, ಪ್ರಧಾನಿ ಮೋದಿ ಅವರಿಗೆ ಪತ್ರದ ಮೇಲೆ ಪತ್ರ ಬರೆದರೂ ಯಾವುದೇ ಪ್ರಗತಿ ಆಗಿಲ್ಲ ಎಂದು ವಿಷಾಧಿಸಿದರು.

ಬರದಂತೆ ತಡೆಯುವ ಪ್ರಯತ್ನ: ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಪ್ರಾರಂಭ ಗೊಳ್ಳದಂತೆ ತಡೆಯುವ ಪ್ರಯತ್ನಗಳನ್ನು ಇಲ್ಲಿನ ಪ್ರಬಲ ಆಸ್ಪತ್ರೆಗಳು ಹಾಗೂ ಇಲ್ಲಿನ ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದೂ ಗೋಪಾಲಯ್ಯ ಆರೋಪಿಸಿದರು. ನಾವು 500ಕ್ಕೂ ಅಧಿಕ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕಾರ್ಮಿಕ ಸಚಿವರಿಗೆ ಹಾಗೂ ವಿಮಾ ಯೋಜನೆ ಅಧಿಕಾರಿಗಳಿಗೆ ಬರೆದಿದ್ದರೂ ಯಾವುದೇ ಫಲಿತಾಂಶ ಸಿಕ್ಕಿಲ್ಲ ಎಂದರು.

ಇದರಿಂದ ಬೇಸತ್ತು ಹಿರಿಯ ನಾಗರಿಕನಾದ ಇದಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನಾನು ಸೆ.16ರಂದು ಬೆಳಗ್ಗೆ 8 ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಅವರು ಹೇಳಿದರು.

ಕಾನೂನಾತ್ಮಕವಾಗಿ ಉಡುಪಿ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಆಗಲೇಬೇಕು. ಇಎಸ್‌ಐ ಕಾನೂನಿನ ಪ್ರಕಾರ 60,000ಕ್ಕಿಂತ ಅಧಿಕ ಇಎಸ್‌ಐ ಸದಸ್ಯರಿದ್ದಾಗ ಆಸ್ಪತ್ರೆ ನಿರ್ಮಾಣಗೊಳ್ಳಲೇಬೇಕು. ಇದು ಕಾರ್ಮಿಕ ವಿಮಾ ಯೋಜನೆಯ ಕಾನೂನು ಹಾಗೂ ನಿಯಮ. ಉಡುಪಿ ಜಿಲ್ಲೆಯಲ್ಲಿ ಇಂದು ಒಂದು ಲಕ್ಷಕ್ಕಿಂತ ಅಧಿಕ ಕಾರ್ಮಿಕ ವಿಮಾ ಯೋಜನೆಯ ಸದಸ್ಯರಿದ್ದು, ಐದು ಲಕ್ಷಕ್ಕಿಂತ ಅಧಿಕ ಫಲಾನುಭವಿಗಳಿದ್ದಾರೆ ಎಂದರು.

ಹಣದ ಕೊರತೆ ಇಲ್ಲ: ಕಾರ್ಮಿಕ ವಿಮಾ ಯೋಜನೆಯಲ್ಲಿರುವ ಹಣ ಸರಕಾರದ ದುಡ್ಡಲ್ಲ. ಅದು ಕಾರ್ಮಿಕರ ಕಷ್ಟದ ದುಡಿಮೆಯ ಹಣ. ಇದನ್ನು ಸಚಿವರು, ರಾಜಕಾರಣಿಗಳು ಪಡೆಯಲುಆಗುವುದಿಲ್ಲ. ಆಸ್ಪತ್ರೆಗೆ ಹಣದ ಕೊರತೆ ಇರುವುದಿಲ್ಲ. ಶೇ.40ಕ್ಕಿಂತ ಹೆಚ್ಚು ಹಣ ಇಎಸ್‌ಐ ಕಾರ್ಪೋರೇಷನ್‌ ನಲ್ಲಿ ಕೊಳೆಯುತ್ತಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕಾರ್ಕಳ, ಉಡುಪಿ, ಮಣಿಪಾಲ ಹಾಗೂ ಕುಂದಾಪುರಗಳಲ್ಲಿ ಡಿಸ್ಪೆನ್ಸರಿಗಳಿದ್ದು, ಸದ್ಯ ಇಲ್ಲಿ ಇಬ್ಬರು ವೈದ್ಯರು ಮಾತ್ರ ಇದ್ದಾರೆ. ಈ ನಾಲ್ಕು ಕಡೆಗಳಲ್ಲಿ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿದ ಅವರು ಅಲ್ಲಿ ಬೇಕಾದ ಎಲ್ಲಾ ಔಷಧಿಗಳನ್ನು ಇಡುವಂತೆ ಆಗ್ರಹಿಸಿದರು. ಇದರೊಂದಿಗೆ ಡಿಸ್ಪೆನ್ಸರಿಗಳಲ್ಲಿ ಅಗತ್ಯ ನರ್ಸುಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಫೌಂಡೇಷನ್‌‌ನ ಉಪಾಧ್ಯಕ್ಷೆ ಗೀತಾ ಸಿ.ಪೂಜಾರಿ, ಪಿಆರ್‌ಓ ನರಸಿಂಹಮೂರ್ತಿ ಹಾಗೂ ಸದಸ್ಯ ಶಿವಕುಮಾರ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!