ಕ್ರೈಸ್ತ ಅಭಿವೃದ್ಧಿ ನಿಗಮ ಸಹಿತ ಸಮುದಾಯದ ಬೇಡಿಕೆ ಈಡೇರಿಸಲು ಸಿಎಂಗೆ ಮನವಿ

ಬೆಂಗಳೂರು, ಸೆ. 15: ‘ಈಗಾಗಲೇ ಘೋಷಿಸಿರುವ ಕ್ರೈಸ್ತ ಅಭಿವೃದ್ಧ ನಿಗಮವನ್ನು ಕಾರ್ಯರೂಪಕ್ಕೆ ತರಲು ಶೀಘ್ರವೇ ಅವಶ್ಯಕ ಕ್ರಮವನ್ನು ತೆಗೆದುಕೊಳ್ಳಬೇಕು’ ಎಂದು ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿದ ಡಾ.ಪೀಟರ್ ಮಚಾದೊ ನೇತೃತ್ವದ ನಿಯೋಗ, ‘ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ನಿಗಮ ಮಂಡಳಿಗಳಿಗೆ, ಸಮಿತಿ ಹಾಗೂ ವಿವಿಧ ಪ್ರಾಧಿಕಾರಗಳ ನೇಮಕಾತಿಯಲ್ಲಿ ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಬೇಕು’ ಎಂದು ಕೋರಿದರು.

‘ರಾಜ್ಯದಲ್ಲಿ ಸುಮಾರು 1ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜುಗಳನ್ನು ಕ್ರೈಸ್ತರು ನಡೆಸುತ್ತಿದ್ದು, ಈಗಾಗಲೇ ಪ್ರಸ್ತಾಪಿಸಲಾದ ‘ರಾಜ್ಯ ಶಿಕ್ಷಣ ನೀತಿ’ ಸಮಿತಿಯಲ್ಲಿ ಕ್ರೈಸ್ತ ಸಮುದಾಯದ ಶಿಕ್ಷಣ ತಜ್ಞರಿಗೆ ಅವಕಾಶವನ್ನು ನೀಡಬೇಕು. ದಲಿತ ಕ್ರೈಸ್ತರಿಗೆ ಅಧಿಕಾರಿಗಳು ಪ್ರವರ್ಗ-1ರ ಜಾತಿ ಪ್ರಮಾಣ ಪತ್ರವನ್ನು ನೀಡಲು ನಿರಾಕರಿಸುತ್ತಾರೆ. ಆದುದರಿಂದ ಹಾಗಾಗಿ ಪ್ರಮಾಣ ಪತ್ರವನ್ನು ನೀಡಲು ಆದೇಶ ಹೊರಡಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಕ್ರೈಸ್ತ ಸಮುದಾಯದಲ್ಲಿ ಮೃತರನ್ನು ಸಮಾಧಿ ಮಾಡುವ ಪದ್ಧತಿ ಇರುವುದರಿಂದ ಈಗಾಗಲೇ ರಾಜ್ಯದಲ್ಲಿರುವ ಕ್ರೈಸ್ತ ಸಮುದಾಯದ ಸ್ಮಶಾನಗಳು ಭರ್ತಿಯಾಗಿವೆ. ಕೊರೋನದ ನಂತರ ಪರಿಸ್ಥಿತಿ ಮತ್ತಷ್ಟು ಜಟಿಲಗೊಂಡಿದ್ದು, ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕ್ರೈಸ್ತರಿಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಸ್ಮಶಾನಕ್ಕಾಗಿ ಸರಕಾರದ ವತಿಯಿಂದ ಜಮೀನು ಮಂಜೂರು ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು ಎಂದು ಅವರು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!