ಪಿಎಂ ವಿಶ್ವಕರ್ಮ ಯೋಜನೆ ಕೋಟ್ಯಂತರ ವಿಶ್ವಕರ್ಮರ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ: ಶಾಸಕ ಕಾಮತ್

ಮಂಗಳೂರು: ಈ ಬಾರಿಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ವರದಾನವಾಗುವ ನಿಟ್ಟಿನಲ್ಲಿ ಘೋಷಿಸಿದ “ಪಿಎಂ ವಿಶ್ವಕರ್ಮ” ಯೋಜನೆಯು ಇದೇ ಸೆಪ್ಟೆಂಬರ್ 17 ರ ವಿಶ್ವಕರ್ಮ ಜಯಂತಿಯಂದು ಜಾರಿಗೊಳ್ಳುತ್ತಿರುವುದು ವಿಶ್ವಕರ್ಮ ಸಮುದಾಯದ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಮುಂದಿನ ಐದು ವರ್ಷಗಳ ಅವಧಿಗೆ (2023 ರಿಂದ 2028) ಅನ್ವಯವಾಗುವಂತೆ 13,000 ಕೋಟಿ ರೂಪಾಯಿ ಹಣಕಾಸು ವೆಚ್ಚದಲ್ಲಿ ಜಾರಿಯಾಗಲಿರುವ ಈ ಯೋಜನೆಯು ದೇಶ ಸ್ವಾತಂತ್ರ್ಯ ಪಡೆದ ನಂತರ ಕರಕುಶಲ ಮತ್ತು ಕುಶಲಕರ್ಮಿಗಳಿಗೆ ಘೋಷಿಸಿದ ಅತಿ ದೊಡ್ಡ ಯೋಜನೆಯಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿ ವಿಶ್ವಕರ್ಮ ಸಮುದಾಯದ ಮೂಲ ಕಸುಬುಗಳ ಪುನರುತ್ಥಾನಕ್ಕೆ ಮೈಲಿಗಲ್ಲಾಗಲಿರುವ ಯೋಜನೆ ಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವುದು ಶ್ಲಾಘನೀಯ. ಆಧುನಿಕ ಜಗತ್ತಿನಲ್ಲಿ ಸಾಂಪ್ರದಾಯಿಕ ವೃತ್ತಿಗಳು ಆತಂಕಕ್ಕೆ ಸಿಲುಕಿದ್ದು, ಈ ಯೋಜನೆಯಿಂದ ಮತ್ತೆ ಕುಲಕಸುಬುಗಳು ಗತವೈಭವಕ್ಕೆ ಮರಳಲು ಈ ಯೋಜನೆಯು ಸಹಕಾರಿಯಾಗಲಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳ 18 ಸಾಂಪ್ರದಾಯಿಕ ಕುಲಕಸುಬುಗಳು ಒಳಗೊಳ್ಳುವ ಈ ಯೋಜನೆಯಡಿಯಲ್ಲಿ ಉಪಕರಣ ಸಾಧನಗಳ ಕಿಟ್ ಪಡೆಯಲು ರೂ.15,000/- ಸಹಾಯಧನ, ಕೌಶಲ್ಯ ವರ್ಧನೆ ತರಬೇತಿ ಪಡೆಯುವವರಿಗೆ ಪ್ರತಿನಿತ್ಯ 500/- ರೂ ಶಿಷ್ಯವೇತನ, ಹಾಗೂ ಐದು ವರ್ಷಗಳ ಅವಧಿಯಲ್ಲಿ ಒಟ್ಟು ಮೂವತ್ತು ಲಕ್ಷ ಕುಟುಂಬಗಳಿಗೆ ತರಬೇತಿ ನೀಡುವ ಯೋಜನೆ ಹೊಂದಿದ್ದು ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡಲಾಗುತ್ತದೆ.

ವಿವಿಧ ಹಂತಗಳಲ್ಲಿ ಕೇವಲ ಶೇ. 5 ರಷ್ಟು ಬಡ್ಡಿ ದರದಲ್ಲಿ ಸಬ್ಸಿಡಿ ಸಹಿತ ರೂ. 1ಲಕ್ಷ ಹಾಗೂ ರೂ.2 ಲಕ್ಷದವರೆಗೂ ಸಾಲ ಸೌಲಭ್ಯ ನೀಡುವುದರ ಜೊತೆಗೆ ಡಿಜಿಟಲ್ ವಹಿವಾಟಿಗೆ ಉತ್ತೇಜನ ಮತ್ತು ಮಾರುಕಟ್ಟೆ ಬೆಂಬಲದಂತಹ ಹೆಚ್ಚುವರಿ ಸಹಾಯವನ್ನು ಸಹ ನೀಡಲಾಗುತ್ತದೆ.

ವಿಶ್ವ ಕರ್ಮ ಸಮುದಾಯದ ಔದ್ಯೋಗಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿರುವ ಈ ಯೋಜನೆಯು ಬಯೋಮೆಟ್ರಿಕ್ ಮೂಲಕ ನೋಂದಾಯಿಸಲಾಗುವುದರಿಂದ ಅರ್ಹ ಫಲಾನುಭವಿಗಳು CSC ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ” ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!