ಉಡುಪಿ ರೈಲು ನಿಲ್ದಾಣದಲ್ಲಿ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ ಉದ್ಘಾಟನೆ

ಉಡುಪಿ, ಸೆ.12: ಕೊಂಕಣ ರೈಲು ಮಾರ್ಗದ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರ್ವರೀತಿಯ ಅತ್ಯಾಧುನಿಕ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಶೀಘ್ರವೇ ಪಾಡ್ ಹೊಟೇಲ್ ಹಾಗೂ ವಿಮಾನ ನಿಲ್ದಾಣಗಳಲ್ಲಿರುವಂತೆ ಎಕ್ಸಿಕ್ಯೂಟಿವ್ ಲಾಂಝ್‌ ಗಳನ್ನು ನಿರ್ಮಿಸಲಾಗುವುದು ಎಂದು ಕೊಂಕಣ ರೈಲ್ವೆಯ ನಿರ್ದೇಶಕ (ಆಪರೇಷನ್) ಸಂತೋಷ್‌ ಕುಮಾರ್ ಝಾ ತಿಳಿಸಿದ್ದಾರೆ.

ಕೊಂಕಣ ರೈಲ್ವೆಯ ವತಿಯಿಂದ ಇಂದು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಿರ್ಮಾಣಗೊಂಡ ಸಂಪೂರ್ಣ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿಯನ್ನು ಉದ್ಘಾಟಿಸಿದರು. ವಿಶ್ರಾಂತಿ ಕೊಠಡಿಯಲ್ಲಿ 20 ಡಾರ್ಮಿಟ್ರಿ ಹಾಗೂ ಎರಡು ಬೆಡ್‌ಗಳ ಸುಸಜ್ಜಿತ ಕೊಠಡಿಗಳಿವೆ.

ಸದ್ಯ ಮುಂಬೈ ಸೆಂಟ್ರಲ್, ಚೆನ್ನೈ ಮುಂತಾದ ಪ್ರಮುಖ ನಗರಗಳ ರೈಲ್ವೆ ನಿಲ್ದಾಣಗಳಲ್ಲಿ ಪಾಡ್ ಹೊಟೇಲ್‌ ಗಳಿವೆ. ಕೊಂಕಣ ರೈಲ್ವೆ ನಿಲ್ದಾಣ ಗಳಲ್ಲಿ ಇದು ಮೊತ್ತಮೊದಲ ಪಾಡ್ ಹೊಟೇಲ್ ಆಗಿರಲಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಪ್ರಯೋಜನವಾಗಲಿದೆ ಎಂದು ಝಾ ನುಡಿದರು.

ಮೂರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿದು ನಿರ್ಮಾಣ ಪ್ರಾರಂಭಗೊಳ್ಳಲಿದೆ. ನಿಲ್ದಾಣದ ಮೊದಲ ಮಹಡಿಯಲ್ಲಿ 3000 ಚದರಡಿ ವಿಸ್ತೀರ್ಣದಲ್ಲಿ ಇದು ನಿರ್ಮಾಣಗೊಳ್ಳಲಿದೆ. ಇಲ್ಲಿ 6ಗಂಟೆ, 12ಗಂಟೆ, 18 ಗಂಟೆ, 24 ಗಂಟೆಗಳ ಕಾಲ ಉಳಿದುಕೊಳ್ಳಲು ಅವಕಾಶವಿರುತ್ತದೆ. ಇದರಲ್ಲಿ ಕನಿಷ್ಠ ದರ 300ರಿಂದ 400ರೂ. (6ಗಂಟೆಗೆ) ಆಗಿರಲಿದೆ ಎಂದರು.

ಉಡುಪಿಯ ಪಾಡ್ ಹೊಟೇಲ್‌ನಲ್ಲಿ 40 ರಿಂದ 60 ಪಾಡ್ (ಮಲಗಬಹುದಾದ ಗೂಡು) ಇರುತ್ತದೆ. ದಿನದ ತುರ್ತು ಕಾರ್ಯಕ್ಕೆ ಆಗಮಿಸುವ ಪ್ರಯಾಣಿಕರು ರೈಲು ನಿಲ್ದಾಣದಲ್ಲೇ ವಾಸ್ತವ್ಯವಿದ್ದು ಅಲ್ಲಿಂದಲೇ ಮರಳಲು ಅವಕಾಶವಿರುತ್ತದೆ. ಒಟ್ಟಾರೆ ಯೋಜನೆಗೆ 35ರಿಂದ 40 ಲಕ್ಷ ರೂ.ವೆಚ್ಚವಾಗಲಿದೆ ಎಂದು ಸಂತೋಷ್‌ ಕುಮಾರ್ ಝಾ ನುಡಿದರು.

ಎಕ್ಸಿಕ್ಯೂಟಿವ್ ಲಾಂಜ್: ಇದರೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಕಾಣಲು ಸಿಗುವ ಎಕ್ಸಿಕ್ಯೂಟಿವ್ ಲಾಂಜ್‌ನ್ನು ಉಡುಪಿ ರೈಲು ನಿಲ್ದಾಣದಲ್ಲೂ ನಿರ್ಮಿಸಲಾಗುತ್ತದೆ. ಕೊಂಕಣ ರೈಲು ಮಾರ್ಗದಲ್ಲಿ ಸದ್ಯ ಮಡಗಾಂವ್‌ನಲ್ಲಿ ಮಾತ್ರ ಈ ಸೌಲಭ್ಯವಿದೆ ಎಂದು ಝಾ ತಿಳಿಸಿದರು.

ಉಡುಪಿ ಕೆಆರ್‌ಸಿಎಲ್‌ನ ಪ್ರಮುಖ ನಿಲ್ದಾಣವಾಗಿರು ವುದರಿಂದ ಇಲ್ಲೂ ಎಕ್ಸಿಕ್ಯೂಟಿವ್ ಲಾಂಜ್ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದ ಅವರು, ಇಲ್ಲಿ ಪ್ರಯಾಣಿಕರಿಗೆ ಸುಖಾಸೀನ ವ್ಯವಸ್ಥೆಯಿದ್ದು, ಸೋಫಾ, ಟಿವಿ, ಮಸಾಜ್ ಪಾರ್ಲರ್, ವೈಫೈ ಇತ್ಯಾದಿ ಸೌಲಭ್ಯಗಳು ದೊರಕಲಿವೆ. ಈ ಯೋಜನೆಗೂ ಸುಮಾರು 40 ಲಕ್ಷ ರೂ. ವೆಚ್ಚದ ಅಂದಾಜು ಮಾಡಲಾಗಿದೆ ಎಂದರು.

ವಂದೇಭಾರತ್ ರೈಲು: ಸದ್ಯ ಕೆಆರ್‌ಸಿಎಲ್ ಮಾರ್ಗದಲ್ಲಿ ಮಡಗಾಂವ್ ಹಾಗೂ ಮುಂಬೈ ನಡುವೆ ಮಾತ್ರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟ ನಡೆಸುತಿದ್ದು, ಭವಿಷ್ಯದಲ್ಲಿ ಮುಂಬೈ- ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ ಗೊಂಡರೆ ಉಡುಪಿಗೆ ಅನುಕೂಲವಾಗಲಿದೆ ಎಂದರು.

ಕೊಂಕಣ ರೈಲ್ವೆಯಲ್ಲಿ ಸದ್ಯ ರೋಹಾ ಮತ್ತು ವೀರ್ ನಡುವೆ ಸುಮಾರು 47ಕಿ.ಮೀ. ಮಾರ್ಗ ಮಾತ್ರ ದ್ವಿಪಥಗೊಂಡಿದ್ದು, ಉಳಿದಂತೆ ಭಾರೀ ವೆಚ್ಚದ ಕಾರಣಕ್ಕಾಗಿ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಸಂಪೂರ್ಣ ಕೊಂಕಣ ರೈಲು ಮಾರ್ಗ ವಿದ್ಯುದ್ದೀಕರಣಗೊಂಡಿದ್ದು, ಸದ್ಯ ಶೇ.80 ರಿಂದ 90ರಷ್ಟು ರೈಲುಗಳು ಈ ಮಾರ್ಗದಲ್ಲಿ ವಿದ್ಯುತ್ ಇಂಜಿನ್‌ನಲ್ಲಿ ಓಡಾಟ ನಡೆಸುತ್ತಿವೆ ಎಂದು ಸಂತೋಷ್‌ ಕುಮಾರ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಂಕಣ ರೈಲ್ವೆಯ ಚೀಫ್ ಕಮರ್ಷಿಯಲ್ ಮ್ಯಾನೇಜರ್ ಎಲ್.ಕೆ.ವರ್ಮಾ, ಕೊಂಕಣ ರೈಲ್ವೆಯ ಕಾರವಾರ ಪ್ರಾದೇಶಿಕ ಮ್ಯಾನೇಜರ್ ಬಿ.ಬಿ.ನಿಕ್ಕಂ, ಡೆಪ್ಯೂಟಿ ಕಮರ್ಷಿಯಲ್ ಮ್ಯಾನೇಜರ್ ಆರ್.ಡಿ.ಗೋಲಬ್, ಮಂಗಳೂರು ಕೊಂಕಣ ರೈಲ್ವೆಯ ಸೀನಿಯರ್ ಆರ್‌ಟಿಎಂ ವಿನಯಕುಮಾರ್ ಹಾಗೂ ಪಿಆರ್‌ಓ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!