ತೀವ್ರಗೊಂಡ ಅನ್ನದಾತರ ಕಿಚ್ಚು: ಏರ್’ಪೋರ್ಟ್ ಗೆ ಮುತ್ತಿಗೆ, ಕರವೇ ಕಾರ್ಯಕರ್ತರ ವಶಕ್ಕೆ
ಬೆಂಗಳೂರು: ರೈತ, ಕಾರ್ಮಿಕ ವಿರೋಧಿ ವಿಧೇಯಕಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸೋಮವಾರ ಕರ್ನಾಟಕ ಬಂದ್ ಮಾಡಲಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗತೊಡಗಿದೆ.
ಮೆಜೆಸ್ಟಿಕ್ ಹಾಗೂ ಬೆಂಗಳೂರು ರೈಲ್ವೇ ನಿಲ್ದಾಣ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕನ್ನಡಪರ, ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರು ಕೆಂಪೇಗೌಡ ರೈಲು ನಿಲ್ದಾಣಕ್ಕೆ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.
ಈ ವೇಳೆ ಇದಕ್ಕೆ ಪೊಲೀಸರು ತಡೆಯೊಡ್ಡಿದ್ದು, ಹಲವು ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ಕರೆದೊಯ್ದಿದ್ದಾರೆ. ಈ ನಡುವೆ ವಿವಿಧ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯುತ್ತಿರುವ ವರದಿಗಳು ಬಂದಿವೆ.
ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಬೆಂಗಳೂರು ರೈಲ್ವೆ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತ ವಿರೋಧಿ ಮಸೂದೆಗಳನ್ನು ಸರ್ಕಾರ ಹಿಂಪಡೆಯಬಹುದು ಎಂಬ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿದೆ. ಈ ಧೋರಣೆಯನ್ನು ವಿರೋಧಿಸಿ, ಉಗ್ರ ಪ್ರತಿಭಟನೆ ನಡೆಸುತ್ತೇವೆ. ನಮ್ಮ ಬೇಡಿಕೆ ಈಡೇರುವ ತನಕ ಹೋರಾಟ ನಿಲ್ಲುವುದಿಲ್ಲ ತಿಳಿಸಿದ್ದಾರೆ.
ಕರವೇ ಕಾರ್ಯಕರ್ತರಿಂದ ಏರ್ ಪೋರ್ಟ್ ಗೆ ಮುತ್ತಿಗೆ, ಬಿಗಿಭದ್ರತೆ
ಕೃಷಿ ಮಸೂದೆಗಳನ್ನು ವಿರೋಧಿಸಿ ಇಂದು ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರೈತ ಮತ್ತು ಹಲವು ಕನ್ನಡಪರ ಸಂಘಟನೆಗಳು ಸಾಥ್ ನೀಡಿವೆ.
ಪ್ರತಿಭಟನೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರೈತರಿಗಾಗಿ ಜೈಲಿಗೆ ಹೋಗಲು ಸಿದ್ದ ಎಂದು ರೈತ ಮುಖಂಡರು ಹೇಳಿದ್ದಾರೆ. ಪ್ರತಿಭಟನಾಕಾರನ್ನು ಕರೆದುಕೊಂಡು ಪೊಲೀಸರು 400 ಬಿಎಂಟಿಸಿ ಬಸ್ ಸಿದ್ದ ಮಾಡಿಕೊಂಡಿದ್ದಾರೆ.
ಕರವೇ ಕಾರ್ಯಕರ್ತರು ಇಂದು ಬೆಳ್ಳಂಬೆಳಗ್ಗೆ ಏರ್ಪೋರ್ಟ್ಗೆ ಮುತ್ತಿಗೆ ಹಾಕಲು ಮುಂದಾಗಿದ್ದು ಈ ವೇಳೆ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.