ಉಡುಪಿ ಕಥೋಲಿಕ್ ಕ್ರೆ.ಕೋ ಆ. ಸೊಸೈಟಿ ಶೇ. 20 ಡಿವಿಡೆಂಡ್ ಘೋಷಣೆ

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 26ನೇ ವಾರ್ಷಿಕ ಮಹಾಸಭೆಯು ಸೆ.10 ರಂದು ಉಡುಪಿ ಶೋಕಮಾತಾ ಇಗರ್ಜಿಯ “ಆವೆ ಮರಿಯಾ” ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಅಲೋಶಿಯಸ್ ಡಿ’ಅಲ್ಮೇಡಾ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಶೇ.20 ಡಿವಿಡೆಂಡ್ ಘೋಷಣೆ: ಸಂಘವು 2022-23 ನೇ ವರದಿ ಸಾಲಿನಲ್ಲಿ ಕಳೆದ ಸಾಲಿಗೆ ಹೋಲಿಸಿದಾಗ ದ್ವಿ-ಗುಣ ರೂ. 83.81 ಲಕ್ಷ ಲಾಭಾಂಶವನ್ನು ಗಳಿಸಿದ್ದು, ಅಧ್ಯಕ್ಷರು ಪಾಲುದಾರರಿಗೆ ಶೇ 20 ಡಿವಿಡೆಂಡ್‌ನ್ನು ಘೋಷಿಸಿದರು. ಸಂದೀಪ್ ಫೆರ್ನಾಂಡೀಸ್ ರವರು ವಾರ್ಷಿಕ ವರದಿಯನ್ನು ಮಂಡಿಸಿದರು.
ಸಾಧನಾ ಪ್ರಶಸ್ತಿ ಹಸ್ತಾಂತರ: ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ವಂದನೀಯ ರೋಯ್ ಲೋಬೋ ರವರು ಸಂಘವು 2022-23ನೇ ಸಾಲಿನಲ್ಲಿ ತೋರ್ಪಡಿಸಿದ ಸಾಧನೆಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್,ಮಂಗಳೂರು ಇವರಿಂದ ಪಡೆದ “ಸಾಧನಾ ಪ್ರಶಸ್ತಿ”ಯನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಹಸ್ತಾಂತರಿಸುತ್ತಾ ಸಂಘದ ಅಭಿವೃಧ್ದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

ಸಂಘದ ವತಿಯಿಂದ ಸನ್ಮಾನ: ಸಂಘದ ನಿರ್ದೇಶಕರಲ್ಲಿ ಒಬ್ಬರಾದ ಡಾ. ನೇರಿ ಕರ್ನೇಲಿಯೋ ರವರು ಲಯನ್ಸ್ ಕ್ಲಬ್ ಇದರ ಜಿಲ್ಲಾ ಗವರ್ನರ್ 317 ಸಿ ಹುದ್ದೆಯನ್ನು ಅಲಂಕರಿಸಿದ ಕಾರಣ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಣೆ : ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಸಂಘದ “ಅ” ವರ್ಗದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಹಾಗೂ ಮಾನಸ ನಿರ್ಮಿತಿ ಮತ್ತು ಪುನರ್ವಸತಿ ಕೇಂದ್ರ,ಪಾಂಬೂರು ಇವರಿಗೆ ಸಹಾಯಧನವನ್ನು ವಿತರಿಸಲಾಯಿತು.
ಮುಂದಿನ ಯೋಜನೆಗಳು : ಉಪಾಧ್ಯಕ್ಷರಾದ ಲೂವಿಸ್ ಲೋಬೋರವರು ಸಂಘದ ಮುಂದಿನ ಯೋಜನೆಗಳಾದ ಸಂಘದ ಕಾರ್ಯವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ಏರಿಸುವುದು ಮತ್ತು ಹೊಸ ಶಾಖೆಗಳನ್ನು ಸ್ವಂತ ಕಟ್ಟಡಗಳಲ್ಲಿ ತೆರೆಯುವ ಬಗ್ಗೆ ಸಭೆಗೆ ಮಾಹಿತಿಯನ್ನು ನೀಡಿದರು. ಸಂಘದ ಏಳಿಗೆ ಹಾಗೂ ಶ್ರೇಯಾಭಿವೃದ್ಧಿ ಕುರಿತು ಸದಸ್ಯದ ಮನವಿ,ಅನಿಸಿಕೆಗಳನ್ನು ಸ್ವೀಕರಿಸಲಾಯಿತು. ನಂತರ ಉಪಾಧ್ಯಕ್ಷರು ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.

ನಿರ್ದೇಶಕರಾದ ಇಗ್ನೇಷಿಯಸ್ ಮೋನಿಸ್, ಪರ್ಸಿ ಜೆ ಡಿಸೋಜ,ಶ್ರೀ ಜೇಮ್ಸ್ ಡಿ’ಸೋಜ,ಶ್ರೀ ಆರ್ಚಿಬಾಲ್ಡ್ ಎಸ್ ಡಿ’ಸೋಜ, ಫ್ರಾಂಕ್ಲೀನ್ ಮಿನೇಜಸ್, ಜೆಸಿಂತಾ ಡಿ’ಸೋಜ, ಗಿಲ್ಬರ್ಟ್ ಫೆರ್ನಾಂಡೀಸ್ ಮತ್ತು ಲೋಯ್ಸೆಟ್ ಜೆ ಕರ್ನೇಲಿಯೊ, ಶಾಖಾ ವ್ಯವಸ್ಥಾಪಕರಾದ ನೈನಾ ಮಿನೇಜಸ್, ಸುನಿಲ್ ಡಿ’ಸೋಜ, ಜೆನೆಟ್ ಡಿ’ಸೋಜ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ಶಿರ್ವ ಶಾಖಾ ವ್ಯವಸ್ಥಾಪಕಿ ಶೀತಲ್ ಮರಿಯಾ ಡಿ’ಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!