ಪರಶುರಾಮ ಥೀಮ್‌ ಪಾರ್ಕ್ ಪ್ರಕರಣ: ಸರಕಾರದ ನಿರ್ದೇಶನದಂತೆ ಕ್ರಮ- ಜಿಲ್ಲಾಧಿಕಾರಿ

ಉಡುಪಿ, ಸೆ.11: ಕಾರ್ಕಳ ತಾಲೂಕಿನ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನ ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಜನರ ಆರೋಪ ಮತ್ತು ಬೇಡಿಕೆಗಳ ಕುರಿತ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರಕಾರಕ್ಕೆ ನೀಡಲಾಗಿದ್ದು, ಅಲ್ಲಿಂದ ಬರುವ ನಿರ್ದೇಶನದಂತೆ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 12.5 ಕೋಟಿ ರೂ. ವೆಚ್ಚದಲ್ಲಿ ಥೀಮ್‌ಪಾರ್ಕ್ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಎರಡು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಯಾವುದೇ ಇಲಾಖೆಯಿಂದ ಹಣ ನೀಡಿಲ್ಲ. ಈ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆ ಆಡಳಿತ್ಮಾಕ ಅನುಮೋದನೆ ನೀಡಿರುವುದರಿಂದ ಈಗಾಗಲೇ ಈ ಕುರಿತು ಮಾಹಿತಿಯನ್ನು ಅವರಿಗೆ ನೀಡಲಾಗಿದೆ. ಇದೀಗ ಪತ್ರ ಕೂಡ ಬರೆಯಲಾಗಿದೆ ಎಂದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣದ ಆರೋಪದ ಬಗ್ಗೆಯೂ ಸಂಬಂಧ ಅಧಿಕಾರಿಯಿಂದ ಮಾಹಿತಿಯನ್ನು ಕೇಳಲಾಗಿದೆ. ಮುಂದೆ ಆ ಕುರಿತು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ವಾರಂಬಳ್ಳಿ ಗ್ರಾಮದಲ್ಲಿ ಐದು ಎಕರೆ ಜಾಗವನ್ನು ಗುರುತಿಸಲಾಗಿದೆ. ಇವರಿಗೆ ಮತ್ತೆ ಹೆಚ್ಚುವರಿಯಾಗಿ ಅರ್ಧ ಎಕರೆ ಜಾಗವನ್ನು ನೀಡಲಾಗುತ್ತದೆ. ಮುಂದೆ ಇಎಸ್‌ಐ ಯವರು ಕೇಂದ್ರ ಸರಕಾರದ ಅನುಮತಿ ಪಡೆದು ಆಸ್ಪತ್ರೆ ನಿರ್ಮಾಣ ಕಾರ್ಯ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಉಡುಪಿ ಜಿಲ್ಲಾಸ್ಪತ್ರೆಯ ಡಯಲೀಸಿಸ್ ಯಂತ್ರದ ಸಮಸ್ಯೆ ಗಮನಕ್ಕೆ ಬಂದಿದ್ದು, ಅಲ್ಲಿರುವ ಎರಡು ಮೂರು ಯಂತ್ರಗಳು ಬಿಟ್ಟರೆ ಉಳಿದವು ಕಾರ್ಯ ನಿರ್ವಹಿಸುತ್ತಿವೆ. ಈ ಕುರಿತು ರಾಜ್ಯಾದ್ಯಂತ ಒಂದೇ ಸಂಸ್ಥೆಗೆ ಟೆಂಡರ್ ವಹಿಸಿ ಕೊಡಲಾಗಿದೆ. ಆ ಸಂಸ್ಥೆಯವರು ಸಮಪರ್ಕವಾಗಿ ಕೆಲಸ ಮಾಡಿಲ್ಲ ದಿದ್ದರೆ ನೋಟೀಸ್ ಕೊಡಲು ಸೂಚಿಸಿದ್ದೇವೆ. ಅಲ್ಲದೆ ಸರಕಾರಕ್ಕೂ ಪತ್ರ ಬರೆದು ತಿಳಿಸಿದ್ದೇವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಎಚ್.ಪ್ರಸನ್ನ, ಡಿವೈಎಸ್ಪಿ ದಿನಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!