ಕಾರ್ಕಳ ಎಣ್ಣೆಹೊಳೆ ಏತ ನೀರಾವರಿ ಯೋಜನೆ ವಿಫಲ: ಮಂಜುನಾಥ ಮುದ್ರಾಡಿ
ಕಾರ್ಕಳ: ‘ತಾಲ್ಲೂಕಿನ ಎಣ್ಣೆಹೊಳೆಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವ ಏತ ನೀರಾವರಿ ಯೋಜನೆಯು ಸಂಪೂರ್ಣ ವಿಫಲವಾಗಲಿದೆ’ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುದ್ರಾಡಿ ಆರೋಪಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆಗಾಗಿ ಗುರುತಿಸಿದ ಜಾಗ ಒಂದೆಡೆ, ಕಾಮಗಾರಿ ನಡೆಯುತ್ತಿರುವ ಜಾಗವೇ ಬೇರೊಂದೆ ಇದೆ. ಇದರಿಂದ ಮುಂಬರುವ ದಿನಗಳಲ್ಲಿ ಜನರಿಗೆ, ಕಷ್ಟನಷ್ಟ ಉಂಟಾಗಲಿದೆ’ ಎಂದು ದೂರಿದರು. ‘₹108 ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ದೊಡ್ಡ ಮೊತ್ತದ ಯೋಜನೆಯಾಗಿದ್ದು , ಇದಕ್ಕಾಗಿ ಸೂಕ್ತ ಪ್ರದೇಶವನ್ನು ಆಯ್ಕೆ ಮಾಡಿ, ಬಳಿಕ ಪೂರಕ ಯೋಜನೆಗಳನ್ನು ಮಾಡಬೇಕಿತ್ತು. ಎಷ್ಟು ಗ್ರಾಮಗಳಿಗೆ ಪ್ರಯೋಜನ ಆಗುತ್ತದೆ ಎಂದು ಲೆಕ್ಕಾಚಾರ ಮಾಡಬೇಕಿತ್ತು. ಸುತ್ತಲಿನ ಪ್ರದೇಶದ ಜನರಿಗೆ ಅಪಾಯಕಾರಿಯಾಗದಂತಿರಬೇಕು. ಆದರೆ ಈ ಯೋಜನೆ ಪ್ರಾರಂಭದಲ್ಲಿಯೇ ವಿಫಲವಾಗಿದೆ’ ಎಂದು ಆರೋಪಿಸಿದರು.
‘ಎಣ್ಣೆಹೋಳೆ ಸಮಿಪ ನೂರಾರು ವರ್ಷಗಳಿಂದಲೂ ನೂರಾರು ಕುಟುಂಬಗಳು ನೆಲೆಸಿವೆ. ಮಂಗಳೂರು ರಾಜ್ಯ ರಸ್ತೆ ಈ ಹೊಳೆಯ ದಡದಲ್ಲಿ ಹಾದು ಹೋಗುತ್ತಿದ್ದು, ಅಂಗಡಿ, ಹೋಟೆಲ್, ತೋಟ, ಗದ್ದೆ ಕೃಷಿ ಈ ಭಾಗದಲ್ಲಿದೆ. ಈ ಬಗ್ಗೆ ಗಮನಿಸಬೇಕು’ ಎಂದರು. ‘ಏತ ನೀರಾವರಿ ಕಾಮಗಾರಿ ನಡೆಯುತ್ತಿರುವ ಎಣ್ಣೆಹೊಳೆ ಪರಿಸರದಲ್ಲಿ ಈಚಿನ ಮಳೆಗೆ 15ಕ್ಕಿಂತಲೂ ಹೆಚ್ಚು ಮನೆ ಅಂಗಡಿ ಮುಂಗಟ್ಟುಗಳಿಗೆ ಕೃತಕ ನೆರೆಯಿಂದ ಹಾನಿಯಾಗಿದೆ. ಪ್ರತಿ ವರ್ಷ ರಸ್ತೆವರೆಗೆ ಪ್ರವಾಹ ಬರುತ್ತದೆ. 5ರಿಂದ 6 ಅಡಿ ಆಗಲವಿರುವ 12 ಪಿಲ್ಲರ್‌ಗಳ ಪ್ರಕಾರ ಸುಮಾರು 60 ರಿಂದ 70 ಅಡಿವರೆಗೆ ಹರಿಯುವ ನೀರಿಗೆ ತಡೆಯುಂಟಾಗುತ್ತದೆ. ಈ ಯೊಜನೆ ಅನುಷ್ಠಾನವಾಗಿ ತಾಂತ್ರಿಕ ವೈಫಲ್ಯದಿಂದ ಗೇಟ್ ತೆರೆಯದಿದ್ದರೆ ಪ್ರದೇಶ ಮುಳುಗಡೆಯಾಗುವ ಸಂಭವವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ತಾಲ್ಲೂಕಿನ ಹೆಬ್ರಿ, ನಿಟ್ಟೆಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ನಿರೀಕ್ಷೆ ಮಟ್ಟದಲ್ಲಿ ಪ್ರಗತಿ ಕಂಡು ಬಂದಿಲ್ಲ. ಕೋಟ್ಯಂತರ ರೂಪಾಯಿ ನೀರು ಪಾಲಾಗಿದೆ. ಅಂತಹ ಪಟ್ಟಿಯಲ್ಲಿ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಸೇರ್ಪಡೆಗೊಳ್ಳದಿರಲಿ’ ಎಂದರು. ಕಾಂಗ್ರೆಸ್ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ರಾಘವ ದೇವಾಡಿಗ, ಪಂಚಾಯತ್‌ರಾಜ್ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಪೂಜಾರಿ, ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಷು, ಹೆಬ್ರಿ ಯುವ ಕಾಂಗ್ರೆಸ್ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ, ಅಜೆಕಾರು ಯುವ ಕಾಂಗ್ರೆಸ್ ಆಸ್ವಿನ್ ರೋಡ್ರಿಗಸ್, ಸ್ಥಳೀಯರಾದ ಅರವಿಂದ್ ನಾಯಕ್, ಡಿ. ಎಣ್ಣೆಹೊಳೆ, ರಿಯಾಜ್ ಎಣ್ಣೆಹೊಳೆ ಇದ್ದರು.