ಕಮಲಾಕ್ಷಿ ವಿ.ಸಹಕಾರ ಸಂಘದ ಬಹುಕೋಟಿ ವಂಚನೆ- ವಿಧಾನಸಭಾ ಅಧ್ಯಕ್ಷರಿಗೆ ಮನವಿ

ಉಡುಪಿ, ಸೆ.11: ಉಡುಪಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಬಹುಕೋಟಿ ವಂಚನೆ ಪ್ರಕರಣವನ್ನು ರಾಜ್ಯ ಸರಕಾರದ ಮಟ್ಟದಲ್ಲಿ ವಿಲೇವಾರಿ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಸಂತ್ರಸ್ತರ ನಿಯೋಗವು ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಅವರಿಗೆ ಸೆ.9ರಂದು ಮನವಿ ಸಲ್ಲಿಸಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘವು ಠೇವಣಿದಾರ ಗ್ರಾಹಕರಿಗೆ ಅವಧಿ ಮುಗಿದ ಠೇವಣಿ ಹಣವನ್ನು ಹಿಂತಿರುಗಿಸಿ ಕೊಡದೆ ಕೋಟಿಗಟ್ಟಲೆ ಆರ್ಥಿಕ ವಂಚನೆ ಮಾಡಿದ್ದು, ಈ ಬಗ್ಗೆ ಠೇವಣಿದಾರರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಸಂಸ್ಥೆಯ ಆಸ್ತಿಪಾಸ್ತಿಗಳನ್ನು ಗ್ರಾಹಕರ ಸಮಕ್ಷಮ ಮಹಜರು ನಡೆಸಿದ್ದು, ಮುಟ್ಟುಗೋಲು ಹಾಕುವಂತೆ ಅಸಿಸ್ಟಂಟ್ ಕಮಿಷನರ್‌ಗೆ ಕೋರಿಕೊಂಡಿದ್ದರು.

ಇದೀಗ ಹಲವು ತಿಂಗಳು ಕಳೆದರೂ ಈವರೆಗೆ ಅಸಿಸ್ಟಂಟ್ ಕಮಿಷನರ್ ಸಂಸ್ಥೆಯ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಲ್ಲ ಹಾಗೂ ಸಂತ್ರಸ್ತರ ಲಿಖಿತ ಮನವಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದುದರಿಂದ ಪ್ರಕರಣವನ್ನು ಸರಕಾರದ ಮಟ್ಟದಲ್ಲಿ ವಿಲೇವಾರಿ ಮಾಡಿ, ಮೋಸ ಹೋದ ಠೇವಣಿದಾರರಿಗೆ ಠೇವಣಿ ಹಣವನ್ನು ಹಿಂತಿರುಗಿಸಿ ಕೊಡಬೇಕು ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿಗೆ ಸ್ಪಂದಿಸಿದ ಯು.ಟಿ.ಖಾದರ್, ಈ ಪ್ರಕರಣವನ್ನು ಸರಕಾರದ ಮಟ್ಟದಲ್ಲಿ ಆದಷ್ಟು ಬೇಗ ವಿಲೇವಾರಿ ಮಾಡಿ ಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂತ್ರಸ್ತರಾದ ಆರ್‌ಟಿಐ ಕಾರ್ಯಕರ್ತ ಶ್ರೀನಿವಾಸ್ ಪ್ರಭು, ರಮೇಶ್ ಪ್ರಭು, ಪ್ರಶಾಂತ್ ಕಾಮತ್ ಉಡುಪಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!