ಉಡುಪಿ: ಬಂದ್ ಗೆ ನೀರಸ ಪ್ರತಿಕ್ರಿಯೆ, 20 ಕ್ಕೂ ಹೆಚ್ಚೂ ಪ್ರತಿಭಟನಾಕಾರರ ಬಂಧನ
ಉಡುಪಿ:(ಉಡುಪಿಟೈಮ್ಸ್ ವರದಿ) ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿ ಪ್ರತಿಭಟಿಸಿ ಉಡುಪಿಯ ವಿವಿಧ ಪಕ್ಷ ಹಾಗೂ ಸಂಘಟನೆಗಳು ಕರೆಕೊಟ್ಟ ಕರ್ನಾಟಕ ಬಂದ್ ಗೆ ಉಡುಪಿ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯ 14 ಸಂಘಟನೆ ಹಾಗೂ ಪಕ್ಷದ ಕಾರ್ಯಕರ್ತರು ಮುಂಜಾನೆಯಿಂದಲೇ ಉಡುಪಿ ಸಿಟಿಬಸ್ ನಿಲ್ದಾಣ ಬಳಿ ಬಸ್ ಸಂಚಾರ ನಿಲ್ಲಿಸುವಂತೆ ಮನವಿ ಮಾಡುತ್ತಿದ್ದರು. ಆದರೆ ಬಸ್ ಮಾಲಕರು ಬಸ್ ಸಂಚಾರ ಸ್ಥಗಿತಕ್ಕೆ ಒಪ್ಪಲಿಲ್ಲ, ಪ್ರಯಾಣಿಕರಲ್ಲೂ ಸಂಘಟನೆ ಮುಖಂಡರು ಇಂದು ಕೇಂದ್ರ, ರಾಜ್ಯ ಸರಕಾರದ ಜನ ವಿರೋಧಿ ನೀತಿ ವಿರೋಧಿಸಿ ಕೆಲಸ ಕಾರ್ಯಗಳಿಗೆ ಹೋಗದಂತೆ ಮನವಿ ಮಾಡಿದರು.
ಸುಮಾರು ಎರಡು ಗಂಟೆಗಳಿಗೂ ಹೆಚ್ಚೂ ಕಾಲ ಪ್ರತಿಭಟನಾಕಾರರು ಮತ್ತು ಬಸ್ ಮಾಲಕರ ನಡುವೆ ವಾಗ್ವಾದ ನಡೆಯುತ್ತಿತ್ತು. ಬಂದ್ ಗೆ ಬಲವಂತ ಮಾಡದಂತೆ ಪೊಲೀಸರು ಕೂಡ ಪ್ರತಿಭಟನಾಕಾರರನ್ನು ಎಚ್ಚರಿಸುತ್ತಿದ್ದರು. ಈ ನಡುವೆ ಬಸ್ ಮಾಲಕರು ಪ್ರಯಾಣಿಕರನ್ನು ಬಸ್ ಗಳಲ್ಲಿ ತುಂಬಿಸುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಪ್ರತಿಭಟನಾಕಾರರು ಸಿಟಿಬಸ್ ನಿಲ್ದಾಣ ಪ್ರವೇಶಿಸುವ ಮುಖ್ಯ ರಸ್ತೆಯಲ್ಲಿ ಕುಳಿತು ಕೇಂದ್ರ ,ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಲು ಪ್ರಾರಂಭಿಸಿದರು.
ತಕ್ಷಣ ಸ್ಥಳದಲ್ಲಿದ್ದ ಡಿವೈಎಸ್ಪಿ ಜಯ್ ಶಂಕರ್, ಸರ್ಕಲ್ ಇನ್ಪೇಕ್ಟರ್ ಮಂಜುನಾಥ್ ನಾಯಕ್ ಸಿಪಿಎಮ್ ಮುಖಂಡ ಬಾಲಕೃಷ್ಣ ಶೆಟ್ಟಿ, ಕಾಂಗೆಸ್ ಮುಖಂಡರಾದ ರಮೇಶ್ ಕಾಂಚನ್ , ಪ್ರಖ್ಯಾತ್ ಶೆಟ್ಟಿ, ಜನಾರ್ಧನ ಭಂಡಾರ್‌ಕಾರ್, ರಮೇಶ್ ಪೂಜಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹಮ್ಮದ್ ಸಹಿತ 20 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದರು.