ಉಡುಪಿ ಜಿಲ್ಲೆಯಾದ್ಯಂತ 200 ಆರೋಗ್ಯ ಶಿಬಿರ: ಡಿಎಚ್ಓ

ಉಡುಪಿ: ಅಸಂಕ್ರಾಮಿಕ ರೋಗಗಳ ಬಗ್ಗೆ ನಾವು ಎಚ್ಚರ ವಹಿಸಬೇಕು. ಕೇವಲ ಅಸಂಕ್ರಾಮಿಕ ಮಾತ್ರವಲ್ಲದೆ ಎಲ್ಲ ರೀತಿಯ ಸಾಂಕ್ರಾಮಿಕ ರೋಗ ಗಳನ್ನು ಕೂಡ ತಡೆಗಟ್ಟುವುದು ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಸಂಘಸಂಸ್ಥೆಗಳ ಜೊತೆಗೂಡಿ ಜಿಲ್ಲೆಯಾದ್ಯಂತ 200 ಆರೋಗ್ಯ ಶಿಬಿರ ಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಪ್ರಯುಕ್ತ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ ಶಾಖೆ, ಜಿಲ್ಲಾಸ್ಪತ್ರೆ ಎನ್ಸಿಡಿ ವಿಭಾಗ, ಜಿಲ್ಲಾ ಸರ್ವೇಕ್ಷಣ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ, ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ, ದಂತ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ ಮತ್ತು ಉಡುಪಿ ಪ್ರಸಾದ್ ನೇತ್ರಾಲಯದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಡುಪಿ ಐಎಂಎ ಭವನದಲ್ಲಿ ರವಿವಾರ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಪಿ.ವಿ. ಭಂಡಾರಿ ಮಾತನಾಡಿ, ಯಾವುದೇ ರೋಗ ಜೊತೆಗೆ ಮನುಷ್ಯ ಡೀಡ್(ಕರಾರು ಪತ್ರ) ಮಾಡಿಕೊಳ್ಳಬೇಕು. ಡಯಟ್, ಎಕ್ಸಸೈಸ್ (ವ್ಯಾಯಾಮ), ಕಾಯಿಲೆ ಕುರಿತು ಸರಿಯಾದ ಎಜುಕೇಶನ್(ಶಿಕ್ಷಣ) ಹಾಗೂ ಸರಿಯಾದ ಡ್ರಗ್ಸ್(ಔಷಧಿ) ಮುಖ್ಯವಾಗಿರುತ್ತದೆ. ಈ ಕುರಿತು ವೈದ್ಯರು ಪ್ರತಿಯೊಬ್ಬರಿಗೂ ಸರಿಯಾದ ಮಾಹಿತಿ ಕೊಡುವ ಕಾರ್ಯ ಮಾಡಬೇಕು ಎಂದರು.

ರಕ್ತದೊತ್ತಡ, ಮಧುಮೇಹ ಎಂಬುದು ಇಂದು ಜನರ ಜೀವನ ಸಂಗಾತಿ ಯಾಗುತ್ತಿದೆ. ಈ ನಿಟ್ಟಿನಲ್ಲಿ ಐಎಂಎ ಜನ ಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, 100ಕ್ಕೂ ಅಧಿಕ ಅರಿವು ಕಾರ್ಯಕ್ರಮ ಹಾಗೂ ಶಿಬಿರಗಳನ್ನು ನಡೆಸಿದೆ. ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಗಮುನ ಕೊಟ್ಟು ತಪಾಸಣೆಗಳನ್ನು ನಡೆಸಿ ಕೊಳ್ಳಬೇಕು ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್, ಮಣಿಪಾಲ ಕೆಎಂಸಿ ದಂತ ವೈದ್ಯಕೀಯ ವಿಭಾಗದ ಡಾ.ರಾಮಪ್ರಸಾದ್, ಮಣಿಪಾಲ ಸಮುದಾಯ ವೈದ್ಯಕೀಯ ವಿಭಾಗದ ಡಾ.ಈಶ್ವರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಮಾತನಾಡಿದರು.

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಐಎಂಎ ಕಾರ್ಯದರ್ಶಿ ಡಾ.ಕೇಶವ್ ನಾಯಕ್, ವೈದ್ಯಕೀಯ ತಜ್ಞರಾದ ಡಾ.ಜಯ ಪ್ರಕಾಶ್ ಹೆಗ್ಡೆ, ಡಾ.ಅನಂತ್ ಶೆಣೈ, ಜಿಲ್ಲಾಸ್ಪತ್ರೆ ಎನ್‌ಸಿಡಿಯ ಆಪ್ತ ಸಮಾಲೋಚಕ ಮನು ಎಸ್.ಬಿ. ಉಪಸ್ಥಿತರಿದ್ದರು. ಮಧುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್ ವಂದಿಸಿದರು. ದೀಪಾಶ್ರೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಮಧುಮೇಹ ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಇಸಿಜಿ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ಚರ್ಮರೋಗ ತಪಾಸಣೆ, ಕಿವಿ ಗಂಟಲು ಮೂಗು ತಪಾಸಣೆ, ಅಸಾಂಕ್ರಾಮಿಕ ರೋಗಗಳ ಬಗ್ಗೆ ಆಪ್ತ ಸಮಾಲೋಚನೆ ನಡೆಸಲಾಯಿತು.

Leave a Reply

Your email address will not be published. Required fields are marked *

error: Content is protected !!