ಕೃಷಿ ಮಸೂದೆ ವಿರೋಧಿಸಿ ಬಂದ್: ನಾಳೆ ಏನಿರುತ್ತೆ..? ಏನಿರಲ್ಲ?
ಬೆಂಗಳೂರು: ಸರ್ಕಾರ ಜಾರಿ ತರಲು ಇಚ್ಛಿಸಿರುವ ಕೃಷಿ ಮಸೂದೆ ವಿಚಾರವಾಗಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ರೈತಪರ ಸಂಘಟನೆಗಳು ಸೆ. 28ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಬಂದ್ ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿದ್ದು ನಾಳೆ ರಾಜ್ಯದಲ್ಲಿ ಜನಜೀವನ ಅಸ್ತವಸ್ಥವಾಗುವ ಸಾಧ್ಯತೆ ಇದೆ.
ನಾಳೆ ಬಂದ್ ಹಿನ್ನಲೆಯಲ್ಲಿ ಇಡೀ ಕರ್ನಾಟಕ ಸ್ಥಬ್ಧವಾಗಲಿದ್ದು, ಸ್ವಲ್ಪ ವ್ಯತ್ಯಯ ಆಗಲಿದೆ. ರೈತಪರ ಸಂಘಟನೆಗಳಿಗೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಕೆಲ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ನೀಡಿವೆ. ರಾಜ್ಯದ 2 ರೈತ ಸಂಘಗಳಾದ ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಜನಶಕ್ತಿ ಸಂಘ ಸೇರಿದಂತೆ 9 ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಈ ಬಂದ್ ಗೆ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿವೆ. ರೈತ ಸಂಘ, ಹಸಿರು ಸೇನೆ, ದಲಿತ ಸಂಘಟನೆಗಳು, ಓಲಾ-ಉಬರ್ ಚಾಲಕರ ಸಂಘಗಳು ರೈತರ ಪ್ರತಿಭಟನೆಗೆ ಬೆಂಬಲ ನೀಡಿವೆ. ಇದರ ಜೊತೆಗೆ ಸಿಐಟಿಯು ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿದೆ. ರೈತರ ಹೋರಾಟಕ್ಕೆ ಬೀದಿ ಬದಿ ವ್ಯಾಪಾರಿಗಳು ಸಂಪೂರ್ಣ ಬೆಂಬಲ ನೀಡಿವೆ. ಹಾಗಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೂ ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ ಅಂತಾ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಾಳೆ ಕರ್ನಾಟಕ ಬಂದ್ ಏನಿರುತ್ತೆ?
ಹಾಲು, ಪೇಪರ್, ಹಣ್ಣು, ತರಕಾರಿ ಎಂದಿನಂತೆ ನಾಳೆಯೂ ಇರಲಿದೆ. ಆಸ್ಪತ್ರೆ, ಮೆಡಿಕಲ್ ಸೇವೆಗಳಿಗೆ ಯಾವುದೇ ಅಡಚಣೆಯಾಗಲ್ಲ. ಪೆಟ್ರೋಲ್ ಬಂಕ್ ಮಾಲೀಕರು ನೈತಿಕವಾಗಿ ಬಂದ್‌ಗೆ ಬೆಂಬಲ ನೀಡಿರೋದ್ರಿಂದ ಪೆಟ್ರೋಲ್ ಬಂಕ್ ಓಪನ್ ಇರುತ್ತೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಮೆಟ್ರೋ, ವಿಮಾನ, ರೈಲು ಸಂಚಾರ ಬಂದ್ ಆಗೋದಿಲ್ಲ. ರಾಜ್ಯ ಸರ್ಕಾರಿ ಸಾರಿಗೆ ನೌಕರರ ಸಂಘ ನೈತಿಕ ಬೆಂಬಲವನ್ನಷ್ಟೇ ನೀಡಿದ್ದು, ಎಂದಿನಂತೆ ಬಸ್ ಸಂಚಾರ ಇರಲಿದೆ. . ಹೋಟೆಲ್ ಮಾಲೀಕರು ಸಹ ನೈತಿಕ ಬೆಂಬಲ ನೀಡಿದ್ದು, ಶುಕ್ರವಾರ ಹೋಟೆಲ್ ಸೇವೆ ಇರುತ್ತೆ ಅಂದಿದ್ದಾರೆ. ಮದ್ಯದ ಅಂಗಡಿ ಮಾಲೀಕರು ನೈತಿಕ ಬೆಂಬಲ ನೀಡಿದ್ದು, ಎಲ್ಲಾ ಮದ್ಯದ ಅಂಗಡಿಗಳು ಓಪನ್ ಇರುತ್ತೆ.
ನಾಳೆ ಬಂದ್‌ವೇಳೆ ಏನಿರಲ್ಲ?
ನಾಳೆ ಓಲಾ-ಉಬರ್ ಸೇವೆ ಸಿಗೋದು ಬಹುತೇಕ ಅನುಮಾನವಾಗಿದೆ. ಇದೇ ರೀತಿ ಆಟೋ-ಟ್ಯಾಕ್ಸಿಗಳು ಸಹ ರಸ್ತೆಗಿಳಿಯೋದು ಡೌಟ್. ಖಾಸಗಿ ಬಸ್ ಸೇವೆ ನಾಳೆ ಬಂದ್ ಆಗುವ ಸಾಧ್ಯತೆ ಇದೆ.
ಇನ್ನು ಪೆಟ್ರೋಲ್- ಡಿಸೇಲ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘದಿಂದ, ಬಾರ್ ಮಾಲೀಕರ ಅಸೋಸಿಯೇಷನ್, ಖಾಸಗಿ ಬಸ್‌ಗಳ ಒಕ್ಕೂಟದಿಂದ, ಕೆಎಸ್ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ, ಮಾಲ್ ಅಸೋಸಿಯೇಷನ್‌ನ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ.