ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಿಂದ 14 ಕೋಟಿ ರೂ. ವಂಚನೆ: ರೈತ ಸಂಘದಿಂದ ಹೋರಾಟ

ಉಡುಪಿ, ಸೆ.9: ಕರಾವಳಿ ಭಾಗದ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿರುವ ಬ್ರಹ್ಮಾವರದ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಇದರ ಗುಜರಿ ಮಾರಾಟದ ಹೆಸರಿನಲ್ಲಿ 14 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಕ್ಕರೆ ಕಾರ್ಖಾನೆಗೆ ವಂಚಿಸಿದ್ದಾರೆ. ಅಲ್ಲದೇ ಸಲ್ಲಬೇಕಾದಷ್ಟು ಜಿಎಸ್‌ಟಿ ಹಣವನ್ನು ಸರಕಾರದ ಬೊಕ್ಕಸಕ್ಕೆ ಸಲ್ಲಿಸದೇ ನಷ್ಟವನ್ನುಂಟು ಮಾಡಿದ್ದಾರೆ ಎಂದು ಕುಂದಾಪುರದ ಮಾಜಿ ಶಾಸಕ ಕೆ.ಪ್ರತಾಪಚಂದ್ರ ಶೆಟ್ಟಿ ನೇತೃತ್ವದ ಉಡುಪಿ ಜಿಲ್ಲಾ ರೈತ ಸಂಘ ಆರೋಪಿಸಿದೆ.

ಕಾರ್ಖಾನೆಯ ತಳಪಾಯದ ಕಲ್ಲನ್ನೂ ಬಿಡದೆ ಎಲ್ಲವನ್ನೂ ಮಾರಾಟ ಮಾಡಿ ಹಲವು ಕಾನೂನು ಬಾಹಿರ ಕೃತ್ಯಗಳನ್ನು ಎಸಗಲಾಗಿದೆ ಎಂದು ಹೇಳಿರುವ ಸಂಘ, ಈ ವಿಚಾರವನ್ನು ಜಿಲ್ಲೆಯ ರೈತರ ಹಾಗೂ ಕಾರ್ಖಾನೆಯ ಸದಸ್ಯರ ಗಮನಕ್ಕೆ ತರಲು ಮತ್ತು ಈ ಕೃತ್ಯಗಳನ್ನು ಎಸಗಿದ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಸರಕಾರವನ್ನು ಒತ್ತಾಯಿಸುವ ಬಗ್ಗೆ ಸಮಲೋಚನೆ ನಡೆಸಲು ರೈತರ ಹಾಗೂ ಕಾರ್ಖಾನೆಯ ಸದಸ್ಯರ ಸಭೆಯನ್ನು ಸೆ.11ರ ಸೋಮವಾರ ಬ್ರಹ್ಮಾವರದಲ್ಲಿ ಕರೆದಿದೆ.

ಸಭೆಯು ಸೋಮವಾರ ಬೆಳಗ್ಗೆ 9:30ಕ್ಕೆ ಹೊಟೇಲ್ ಆಶ್ರಯದ ಅಂಬಾ ಸಭಾಭವನದಲ್ಲಿ ನಡೆಯಲಿದೆ. ದ.ಕ.ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಹಿತದೃಷ್ಟಿಯಿಂದ, ಕಾರ್ಖಾನೆಯ ಉಳಿವಿಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬಲನೀಡುವಂತೆ ಜಿಲ್ಲಾ ರೈತ ಸಂಘ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!