ಉಡುಪಿ – ಮಣಿಪಾಲ ದರೋಡೆ ಪ್ರಕರಣದ ಪ್ರಮುಖ ಆರೋಪಿ ಬಂಧನ
ಉಡುಪಿ: (ಉಡುಪಿಟೈಮ್ಸ್ ವರದಿ)ಕಳೆದ ಸೆ. 19 ರಂದು ಮುಂಜಾನೆ ಮಣಿಪಾಲ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಸಾರ್ವಜನಿಕರನ್ನು ಬೆದರಿಸಿ, ಚೂರಿ ಮತ್ತು ಸ್ಕ್ರೂಡ್ರೈವರ್ ನಿಂದ ಹಲ್ಲೆ ಮಾಡಿ ಹಣ, ಮೊಬೈಲ್ ಮತ್ತು ಡಸ್ಟ್, ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಉಡುಪಿ ಮತ್ತು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಠಾಣೆಯಲ್ಲಿ 3 ಪ್ರಕರಣಗಳು ಹಾಗೂ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಗಿತ್ತು. ಬೈಕ್ ನಲ್ಲಿ ಬಂದು ದಾರಿಹೋಕರನ್ನು ಬೆದರಿಸಿ ಅವರ ಬೆಲೆ ಬಾಳುವ ವಸ್ತುಗಳನ್ನು ದೋಚುತಿದ್ದರು. ಇದಕ್ಕೆ ಒಪ್ಪದಿದ್ದಾಗ ವ್ಯಕ್ತಿಗಳಿಗೆ ಆಯುಧಗಳಿಂದ ತಿವಿದು ದರೋಡೆ ಮಾಡುತ್ತಿದ್ದ ಪ್ರಮುಖ ಆರೋಪಿಯಾದ ಕಾಪು ಮೂಲದ ಮಲ್ಲಾರು, ಕೊಂಬಗುಡ್ಡೆ ನಿವಾಸಿ ಮಹಮ್ಮದ್ ಆಶಿಕ್ (19) ನನ್ನು ಬಂಧಿಸಲಾಗಿದೆ.
ಇನ್ನೊರ್ವ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿ ವಶದಲ್ಲಿದ್ದ ಕೃತ್ಯಕ್ಕೆ ಬಳಸಿದ ಯಮಹಾ ಬೈಕ್, ಸುಲಿಗೆ ಕೃತ್ಯಕ್ಕೆ ಬಳಸಿದ ಸ್ಕ್ರೂ ಡ್ರೈವರ್, 1 ಚೂರಿ ಹಾಗೂ ಸಾರ್ವಜನಿಕರಿಂದ ಸುಲಿಗೆ ಮಾಡಿದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನಿನ್ನೆಯೂ ಸಹ ಆರೋಪಿತನು ಸುಲಿಗೆ ಕೃತ್ಯವನ್ನು ಮುಂದುವರೆಸಲು ಯೋಜನೆ ಹಾಕಿಕೊಂಡು ಉಡುಪಿ – ಮಣಿಪಾಲ ಪರಿಸರದಲ್ಲಿ ಸುತ್ತಾಡುತ್ತಿದ್ದಾಗ ಪೊಲೀಸರು ಈತನನ್ನು ಬಂಧಿಸುತ್ತಾರೆ. ಆರೋಪಿ ಆಶಿಕ್ 4 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾದ ನಂತರ ಕಾಪುವಿನಲ್ಲಿ ವರದಿಯಾದ ಕೊಲೆ ಪ್ರಯತ್ನ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ
ಮೇಲ್ಕಂಡ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಆರೋಪಿಗಳ ಪತ್ತೆಗಾಗಿ ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ್ ಮತ್ತು ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಎಂ ಗೌಡ ಅವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿದ್ದರು.
ಈ ಪ್ರಕರಣದ ಆರೋಪಿಗಳು ಬೆಂಗಳೂರಿನಲ್ಲಿ ಕಳ್ಳತನ ಮಾಡಿಕೊಂಡು ಬಂದಿದ್ದ ಎರಡು ಲಕ್ಷ ರೂಪಾಯಿ ಮೌಲ್ಯದ ಒಂದು ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲು ಕಾರ್ಯತಂತ್ರ ರೂಪಿಸಲಾಗಿದೆ.