ಕಾರ್ಕಳ: ಪರಶುರಾಮನ ನಕಲಿ ಮೂರ್ತಿ ಪ್ರತಿಸ್ಠಾಪಿಸಿ ವಂಚನೆ- ಮುನಿಯಾಲ್ ಆರೋಪ

ಉಡುಪಿ : ಈ ವರ್ಷದ ಪ್ರಾರಂಭದಲ್ಲಿ ಚುನಾವಣೆಗೆ ಪೂರ್ವದಲ್ಲಿ ತರಾತುರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಂಡ ಕಾರ್ಕಳ ತಾಲೂಕು ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಪ್ರತಿಷ್ಠಾಪನೆ ಗೊಂಡ ಪರಶುರಾಮ ಮೂರ್ತಿ ನಕಲಿ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಿದ ಬಳಿಕ ಅದನ್ನು ಬದಲಿಸಲು ಕ್ರಮಕೈಗೊಳ್ಳ ಬೇಕೆಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ಗಿಮಿಕ್ ಆಗಿ ತರಾತುರಿಯಿಂದ ಅಲ್ಲಿ ನಕಲಿ ಮೂರ್ತಿಯನ್ನು ಪ್ರತಿಷ್ಠಾಪನೆಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮೂರ್ತಿಯನ್ನು ಬದಲಿಸಲು ನಡೆದಿರುವ ಪ್ರಯತ್ನಗಳನ್ನು ನೋಡಿದರೆ ಇಡೀ ಯೋಜನೆಯಲ್ಲಿ ದೊಡ್ಡ ಅವ್ಯವಹಾರ ನಡೆದಿರುವ ಶಂಕೆಯೊಂದಿಗೆ ಹತ್ತಾರು ಅನುಮಾನಗಳು ಮೂಡುತ್ತಿದೆ ಎಂದವರು ಆರೋಪಿಸಿದರು.

ಅಲ್ಲಿ ಪ್ರತಿಷ್ಠಾಪನೆಗೊಂಡಿರುವ ಮೂರ್ತಿ ಮೊಣಕಾಲವರೆಗೆ ಮಾತ್ರ ಕಂಚಿನದ್ದಾಗಿದ್ದು, ನಂತರ ಯಾವುದರಿಂದ ಮಾಡಿದ್ದು ಎಂಬ ಬಗ್ಗೆಊಹಾಪೋಹ ಕೇಳಿಬಂದಿದೆ. ಸಾವಿರಾರು ಭಕ್ತರನ್ನು ವಂಚಿಸಿ ಈ ಮೂಲಕ ನಾಡಿನ ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ಚುನಾವಣೆಯಲ್ಲಿ ಮಾಜಿ ಸಚಿವ ಸುನಿಲ್‌ ಕುಮಾರ್ ವಿರುದ್ಧ ಸ್ಪರ್ಧಿಸಿ ಅಲ್ಪ ಮತದಿಂದ ಸೋತ ಮುನಿಯಾಲು ಹೇಳಿದರು.

ಕಾರ್ಕಳ ತಾಲೂಕು ಬೈಲೂರು ಗ್ರಾಮದ ಉಮಿಕ್ಕಳ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ಒಟ್ಟು 14.42 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಇದರಲ್ಲಿ ಈಗಾಗಲೇ 6.72 ಕೋಟಿ ರೂ. ಪಾವತಿ ಯಾಗಿದೆ. ಇದರಲ್ಲಿ 2 ಕೋಟಿ ರೂ.ಪಾವತಿಗೆ ಸಂಬಂಧಿಸಿ ಯಾವುದೇ ದಾಖಲೆಗಳಿಲ್ಲ ಎಂದರು. ಥೀಮ್ ಪಾರ್ಕ್‌ನ ಉದ್ಘಾಟನೆಯನ್ನು ಜನವರಿ 27ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ 2.18 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇದರಲ್ಲಿ 60 ಲಕ್ಷ ರೂ.ಗಳ ಪಾವತಿಗೆ ಯಾವುದೇ ಬಿಲ್ಲುಗಳು ಲಭ್ಯವಾಗಿಲ್ಲ ಎಂದು ಆರೋಪಿಸಿದರು.

ಪರಶುರಾಮ ಪ್ರತಿಮೆ ನಿರ್ಮಾಣಕ್ಕೆ ಬೆಂಗಳೂರಿನ ಕಂಗೇರಿಯಲ್ಲಿರುವ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಮೂರ್ತಿಗೆ 2.04 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ. ಮೂರ್ತಿ ರಚನೆಗೆ 2022ರ ಡಿ.6ರಂದು ಕೊಟೇಷನ್ ಆಹ್ವಾನಿಸಿದ್ದು, ಅದೇ ಡಿ.22 ರಂದು ಕಾರ್ಯಾದೇಶವಾಗಿದೆ. ಆಶ್ಚರ್ಯವೆಂದರೆ ನವೆಂಬರ್ 25ರಂದೇ ತಲಾ 50 ಲಕ್ಷದಂತೆ ಒಂದು ಕೋಟಿ ರೂ.ಗಳನ್ನು ಮೂರ್ತಿ ರಚನೆಗೆ ಪಾವತಿಸಲಾಗಿದೆ ಎಂದರು.

ಕಂಗೇರಿಯಲ್ಲಿ ಪರಶುರಾಮ ಮೂರ್ತಿಯ ರಚನೆ ಇನ್ನೂ ನಡೆಯುತ್ತಿದೆ. ಇದನ್ನು ಖುದ್ದು ನಾನೇ ನೋಡಿದ್ದೇನೆ. ವಿಚಾರಿಸಿದಾಗ ಅಲ್ಲಿರುವ ಮೂರ್ತಿ ಯಾವುದೋ ಎಂಬುದು ತಮಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ಹೀಗಾಗಿ ಪ್ರತಿಷ್ಠಾಪನೆಗೊಂಡಿರುವುದು ನಕಲಿ ಮೂರ್ತಿ ಎಂಬುದು ಸಾಬೀತಾಗುತ್ತದೆ. ಹೀಗಾಗಿ ಮೂರ್ತಿಯ ನೈಜತೆ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಬೇಕು ಎಂದರು. ನಕಲಿ ಮೂರ್ತಿಯ ಪ್ರತಿಸ್ಠಾಪನೆಯಿಂದ ಪರಿಸರ 30-40 ಮನೆಗಳಿಗೆ ಅಪಾಯವಿದೆ ಎಂದವರು ದೂರಿದರು.

ಜಾಗ ಮಂಜೂರಾಗಿಲ್ಲ: ಥೀಮ್ ಪಾರ್ಕ್ ನಿರ್ಮಾಣಗೊಂಡಿರುವ ಎರ್ಲಪಾಡಿ ಗ್ರಾಮದ 1.58 ಎಕರೆ ಗೋಮಾಳ ಜಾಗವಾಗಿದ್ದು, ಅದನ್ನು ಕಾಮಗಾರಿಗೆ ಬಿಟ್ಟುಕೊಟ್ಟಿರಲಿಲ್ಲ. ಯಾವುದೇ ಅನುಮೋದನೆ ಪಡೆಯದೇ ಸರಕಾರದ ಗರಿಷ್ಠ ಪ್ರಮಾಣದ ಅನುದಾನವನ್ನು ಅನಧಿಕೃತವಾಗಿ ನಿರ್ಮಾಣಗೊಂಡಿರುವ ಥೀಮ್‌ಪಾರ್ಕ್‌ಗೆ ನೀಡಿರುವುದು ಮತ್ತೊಂದು ಗೊಂದಲಕ್ಕೆ ಕಾರಣವಾಗಿದೆ ಎಂದು ಮುನಿಯಾಲು ಹೇಳಿದರು.

ಇದೀಗ ಕಳೆದ ಮಾ.15ರಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಈ ಜಮೀನಿನ ಮಂಜೂರಾತಿ ಯನ್ನು ತಿರಸ್ಕರಿಸಿದ್ದರೆ, ಮೇ 22ರಂದು ಉಡುಪಿ ಜಿಲ್ಲಾಧಿಕಾರಿ ಇಡೀ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಕಾರ್ಕಳ ತಹಶೀಲ್ದಾರ್ ಅವರೂ ಈ ಜಮೀನಿನ ಪ್ರಸ್ತಾವನೆಯನ್ನು ತಿರಸ್ಕರಿಸಿ ಎರ್ಲಪಾಡಿ ಪಿಡಿಓ ಅವರಿಗೆ ಆದೇಶ ಜಾರಿಗೊಳಿಸಿದ್ದಾರೆ. ಹೀಗಾಗಿ ಇಡೀ ಯೋಜನೆಯೇ ಅಕ್ರಮ ಎಂದಂತಾಗಿದೆ ಎಂದವರು ಹೇಳಿದರು.

ಶಾಸಕರ ನಿಗೂಢ ಹಲವಾರು ಸಂಶಯಕ್ಕೆ ಕಾರಣವಾಗಿದೆ: ಕಾರ್ಕಳದ ಕಾಂಗ್ರೆಸ್ ಮುಖಂಡ ಶುಭದ ರಾವ್ ಅವರು ಮಾತನಾಡಿ, ಈ ವಿಷಯದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಇದುವರೆಗೆ ಮಾತನಾಡಿಲ್ಲ. ಅವರ ನಿಗೂಢ ಮೌನ ಸಂಶಯಗಳಿಗೆ ಕಾರಣವಾಗಿದೆ. ಎಲ್ಲಾ ಘಟನೆಗಳಿಗೂ ತಕ್ಷಣ ಪ್ರತಿಕ್ರಿಯಿಸುವ ಸುನಿಲ್ ಕುಮಾರ್ ತನ್ನ ಕ್ಷೇತ್ರದಲ್ಲೇ ಕೆಲವರು ಕಳೆದ 10 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತಿದ್ದರೂ ಪ್ರತಿಕ್ರಿಯಿಸಿ ಹಾಗೂ ಅವರನ್ನು ಭೇಟಿಯಾಗಲೂ ಬಂದಿಲ್ಲ ಎಂದು ದೂರಿದರು.

ಇದೀಗ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಲು ಹೇಳಿದ್ದು, ತನಿಖೆಯಾದ ಬಳಿಕವಷ್ಟೇ ಕೆಲಸ ಮುಂದುವರಿಸಬಹುದು ಎಂದಿದ್ದಾರೆ ಎಂದು ಮುನಿಯಾಲು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ದೇವಾಡಿಗ, ದೀಪಕ್ ಕೋಟ್ಯಾನ್, ಸುಧೀರ್ ಕುಮಾರ್, ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.”

Leave a Reply

Your email address will not be published. Required fields are marked *

error: Content is protected !!