ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ನಿಲುವು ಖಂಡನೀಯ: ಕಾಂಗ್ರೆಸ್

ಉಡುಪಿ: ಎ.ಪಿ.ಎಂ.ಸಿ.ಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ನೆರವಾಗಲು ಕೇಂದ್ರ ಕೃಷಿ ವಿಧೇಯಕವನ್ನು ತಂದಿದೆ. ಎಪಿಎಂಸಿ ತಿದ್ದುಪಡಿ ಮಸೂದೆಯಲ್ಲಿ ರೈತ ಬೆಳೆಸಿದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಷಯದಲ್ಲಿ ಕೇಂದ್ರ ಯಾವುದೇ ಖಾತ್ರಿ ನೀಡಿಲ್ಲ. ಬೆಂಬಲ ಬೆಲೆ ವ್ಯವಸ್ಥೆಗೆ ಏನೂ ಧಕ್ಕೆ ಆಗುವುದಿಲ್ಲ ಎಂದು ಪ್ರಧಾನಿಯವರು ಹೇಳಿದರೂ ಕಾನೂನಿನಲ್ಲಿ ಈ ಸಂಗತಿಯನ್ನು ಸೇರ್ಪಡೆ ಮಾಡಬೇಕಾಗಿದೆ.

ಕೇಂದ್ರ ಖಾತ್ರಿ ನೀಡದೆ ಹೋದರೆ ನೂತನ ವಿಧೇಯಕದಿಂದ ರೈತನಿಗೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚು. ವಿಶೇಷವಾಗಿ ಬಡವರ ಆಹಾರ ಭದ್ರತೆಯ ಬೀಗದ ಕೈ ಕಾರ್ಪೋರೇಟ್ ಕುಳಗಳ ಕೈ ಸೇರುತ್ತದೆ. ಕಾರ್ಪೋರೇಟ್ ಸಂಸ್ಥೆಗಳು ನೇರ ಖರೀದಿ ಮಾಡುವುದರಿಂದ ಸರಕಾರಿ ಎ.ಪಿ.ಎಂ.ಸಿ. ಬಂದ್ ಆಗುವ ಸಾಧ್ಯತೆ ಜಾಸ್ತಿ ಇದೆ. ಆಗ ದೊಡ್ಡ ದೊಡ್ಡ ವ್ಯಾಪಾರಿಗಳು ಗುಂಪು ಕೂಡಿ ಬೆಲೆ ನಿಗದಿ ಮಾಡುತ್ತಾರೆ. ಇದರಿಂದ ರೈತರ ಬೆಳೆಗಳಿಗೆ ನ್ಯಾಯಯುತವಾದ ಬೆಲೆ ದೊರಕಲಾರದು. ಕಾರ್ಪೋರೇಟ್ ಸಂಸ್ಥೆಗಳ ಉದ್ದೇಶ ಲಾಭ ಮಾಡಿಕೊಳ್ಳುವುದೇ ಹೊರತು ರೈತರಿಗೆ ಸಹಾಯ ಮಾಡಬೇಕು ಎಂಬ ಇರಾದೆ ಹೊಂದಿರುವುದಿಲ್ಲ. ಇದರಿಂದ ರೈತನ ಜೊತೆ ಜನಸಮಾನ್ಯನಿಗೂ ಕೃಷಿ ಉತ್ಪನ್ನಗಳ ಖರೀದಿ ಸಮಯದಲ್ಲಿ ಬಿಸಿ ತಟ್ಟುವುದರಲ್ಲಿ ಸಂಶಯವಿಲ್ಲ.

ಬಂಡವಾಳ ಶಾಹಿಗಳು ಮಾರುಕಟ್ಟೆ ಹಾಗೂ ಬೆಲೆಯ ಮೇಲೆ ಖರೀದಿ, ದಾಸ್ತಾನು ಹಾಗೂ ಪೂರೈಕೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರೆ ರೈತರು ಮತ್ತಷ್ಟು ಅಸಹಾಯಕರಾಗುತ್ತಾರೆ. ಈಗ ಮಧ್ಯವರ್ತಿಗಳ, ಏಜೆಂಟರ ಬಗ್ಗೆ ಕಿಡಿಕಾರುವ ಬಿಜೆಪಿ ಒಂದು ಸಮಯದಲ್ಲಿ ಅವರ ಪರ ವಾದಿಸಿತ್ತು. ಕೇಂದ್ರ ಸಚಿವೆಯಾಗಿದ್ದ ದಿ. ಸುಷ್ಮಾ ಸ್ವರಾಜ್ ಅವರು ಸಂಸತ್ತಿನಲ್ಲಿ ರೈತರು ಮತ್ತು ಎ.ಪಿ.ಎಂ.ಸಿ. ಏಜೆಂಟರ ನಡುವೆ ಬಾಂಧವ್ಯವನ್ನು ವಿವರಿಸಿ ರೈತರ ಪಾಲಿಗೆ ಏಜೆಂಟರು ಎ.ಟಿ.ಎಂ.ಗಳಾಗಿದ್ದಾರೆ ಎಂಬುದನ್ನು ನೆನಪಿಸಿಕೊಂಡಿದ್ದರು.


ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಏಕಸ್ವಾಮ್ಯವಿದೆ ಎಂದಾದರೆ ಕೇಂದ್ರ ಆ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಆಲೋಚಿಸಬೇಕಿತ್ತೇ ಹೊರತು ಕಾರ್ಪೋರೇಟ್ ಕುಳಗಳಿಗೆ ಪೂರಕವಾಗಿ ಎ.ಪಿ.ಎಂ.ಸಿ. ಮಸೂದೆಯನ್ನು ತಂದಿರುವುದು ರೈತರನ್ನು ಇನ್ನಷ್ಟು ಸಂಕಷ್ಟಗಳಿಗೆ ದೂಡಿದಂತಾಗಿದೆ. ಮಸೂದೆಯ ಲಾಭ ಪಡೆಯಲು ಕಾರ್ಪೋರೇಟ್ ಸಂಸ್ಥೆಗಳು ಕೃಷಿಕರಿಗೆ ಬೆಳೆಗೆ ಮುಂಚಿತವಾಗಿ ಮುಂಗಡ ಹಣ ನೀಡುತ್ತಾರೆ. ಸಾಲ ಕೊಟ್ಟ ಮೇಲೆ ರೈತರು ಬೆಳೆಯುವ ಕೃಷಿ ಉತ್ಪನ್ನಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ರೈತನು ತಾನು ಬೆಳೆದ ಬೆಳೆಗೆ ತನ್ನ ಮಾರಾಟ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾನೆ.

ಮುಂಗಡ ಹಣ ಪಡೆದು ಕೃಷಿ ಮಾಡಿದ ರೈತನ ಬೆಳೆ ಯಾವುದಾದರೂ ಕಾರಣದಿಂದ ನಾಶವಾದರೆ ಆಗ ಕಾರ್ಪೋರೇಟ್ ಸಂಸ್ಥೆಗಳು ತಾವು ಕೊಟ್ಟ ಹಣಕ್ಕೆ ರೈತನ ಜಮೀನನ್ನು ವಶಪಡಿಸಿಕೊಳ್ಳುವ ದಿನ ಬರುತ್ತದೆ. ಇದಕ್ಕಾಗಿಯೇ ಸರಕಾರ ಕೃಷಿ ಜಮೀನನ್ನು ಕೃಷಿಕರಲ್ಲದವರೂ ಖರೀದಿ ಮಾಡಬಹುದೆಂದು ಭೂಮಸೂದೆ ಕಾಯಿದೆಗೆ ತಿದ್ದುಪಡಿ ತಂದಿದೆ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ರೈತರ ಅಸ್ಥಿತ್ವಕ್ಕೆ ದಕ್ಕೆ ತರುವಂತಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!