ಇನ್ನು ನಿಮ್ಮ ಈ ಆಟಗಳು ನಡೆಯೋದಿಲ್ಲ ಮಿಸ್ಟರ್ ನರೇಂದ್ರ ಮೋದಿ!- ಸಿದ್ದರಾಮಯ್ಯ ಗುಡುಗು-
ಬೆಂಗಳೂರು: ಮಿಸ್ಟರ್ ಪ್ರಧಾನಿ ನರೇಂದ್ರ ಮೋದಿ ಅವರೇ, ಇನ್ನು ನಿಮ್ಮ ಈ ಆಟಗಳು ನಡೆಯೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಗುಡುಗಿದ್ದಾರೆ.
ಪುಕ್ಕಟೆ ಪ್ರಚಾರ ಪಡೆಯುವುದು, ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸುವುದು, ಮತ್ತೊಬ್ಬರ ಸಾಧನೆಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವುದು, ಕೋಮು ವಿಷವನ್ನು ಸಮಾಜದಲ್ಲಿ ಸದಾಕಾಲ ಬಿತ್ತುವುದು, ದಿಟ್ಟ ಪ್ರಶ್ನೆಗಳನ್ನು ಕೇಳಿದಾಗ ಜಾಗ ಖಾಲಿ ಮಾಡುವುದು ಇವೆಲ್ಲಾ ಯಾರ ಗುಣಗಳು ಎನ್ನುವುದನ್ನು ದೇಶದ ಜನತೆ ಈ ಒಂಬತ್ತು ವರ್ಷಗಳಲ್ಲಿ ಚೆನ್ನಾಗಿ ಅರಿತಿದ್ದಾರೆ ಎಂದಿದ್ದಾರೆ.
#AnswerMadiModi ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಸ್ರೋ ಸಾಧನೆಯ ಬಗ್ಗೆ ದೇಶ ಸದಾ ಹೆಮ್ಮೆ ಪಡುತ್ತದೆ. ಆದರೆ, ಈಗ ನಿಮ್ಮ ಸಾಧನೆ ಏನೆಂದು ಹೇಳಿ, ಇನ್ನು ‘ಮನ್ ಕೀ ಬಾತ್’ ಸಾಕು ಮಾಡಿ, ‘ಕಾಮ್ ಕೀ ಬಾತ್’ ಹೇಳಿ. ಒಂಭತ್ತು ವರ್ಷ ದೇಶವನ್ನಾಳಿರುವ ನೀವು ದೇಶಕ್ಕೆ ನೀಡಿದ ಕೊಡುಗೆಯಾದರೂ ಏನು? ಮಾಡಿರುವ ಸಾಧನೆಯಾದರೂ ಏನೆಂದು ಹೇಳಿ. ನೋಟು ರದ್ದತಿ, ನಿರುದ್ಯೋಗದ ಹೆಚ್ಚಳ, ಉದ್ಯಮಿಗಳ ವಂಚನೆಗೆ ನೆರವು, ಕೋಮುದ್ವೇಷ ಮತ್ತು ಜನಾಂಗೀಯ ಹಿಂಸಾಚಾರಗಳಿಗೆ ಕುಮ್ಮಕ್ಕು, ಶತ್ರು ದೇಶ ನಮ್ಮ ನೆಲವನ್ನು ಆಕ್ರಮಿಸುತ್ತಿದ್ದರೂ ಬಾಯಿ ಬಿಡಲಾರದ ಹೇಡಿತನ- ಯಾವುದು ನಿಮ್ಮ ಸಾಧನೆ? ಹೇಳಿ ಎಂದು ಕೇಳಿದ್ದಾರೆ.
ನಮ್ಮ ಹೆಮ್ಮೆಯ ಇಸ್ರೋದ ಶ್ರೇಷ್ಠ ವಿಜ್ಞಾನಿಗಳ ಸಾಧನೆಯನ್ನು ತನ್ನ ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳುವಷ್ಟು ಸಣ್ಣತನಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಇಳಿದಿರುವುದು ವಿಷಾದನೀಯ ಮಾತ್ರವಲ್ಲ ಖಂಡನೀಯ ಕೂಡಾ ಆಗಿದೆ. ಸೌರಯಾನದ ಯಶಸ್ಸುಗಳಿಗೆ ನಮ್ಮ ವಿಜ್ಞಾನಿಗಳಷ್ಟೇ ಅರ್ಹರು ಎಂದಿದ್ದಾರೆ.
ಜಿ20 ಸಭೆಯ ಆಯೋಜನೆಯನ್ನೇ ತನ್ನ ಗೆಲುವು ಎಂದು ತೋರಿಸಿಕೊಳ್ಳುವ ಸಾಧನಾ ದಾರಿದ್ರ್ಯ ‘ಮೋದಿ & ಕಂಪೆನಿ’ಗೆ ಬಂದಿದೆ. ಚುನಾವಣೆ ಹೊಸ್ತಿಲಲ್ಲಿರುವಾಗ ‘ಏಕರೂಪ ನಾಗರಿಕ ಸಂಹಿತೆ’, ‘ಜನಸಂಖ್ಯಾ ನಿಯಂತ್ರಣ ಮಸೂದೆ’ ಮುಂತಾದವುಗಳ ಕುರಿತು ತನ್ನ ಸಂಘ ಪರಿವಾರದ ಮೂಲಕ ಹಿಂಬಾಗಿಲಿನ ಚರ್ಚೆಗಳಿಗೆ ಚಾಲನೆ ನೀಡಿದೆ. ಅದಾನಿ ಸಂಸ್ಥೆಯ ಅಕ್ರಮಗಳ ತನಿಖೆಗೆ ಜಂಟಿ ಸದನ ಸಮಿತಿ ಮಾಡಬೇಕು ಎನ್ನುವ ವಿಪಕ್ಷಗಳ ಆಗ್ರಹಕ್ಕೆ ನರೇಂದ್ರ ಮೋದಿ ಅವರು ಜಾಣಕಿವುಡಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಉದ್ಯಮಪತಿಗಳೊಂದಿಗಿನ ತಮ್ಮ ಅಪವಿತ್ರ ಮೈತ್ರಿ ಪುರಾವೆಸಹಿತ ಹೊರಬೀಳುವ ಭಯ ಮೋದಿಯವರನ್ನು ಕಾಡುತ್ತಿದೆ. ದೇಶದ ಜನರನ್ನು ಕಾಡುತ್ತಿರುವ ಬೆಲೆ ಏರಿಕೆ, ನಿರುದ್ಯೋಗ, ಸಾಲದ ಮೇಲಿನ ಬಡ್ಡಿದರದ ಹೆಚ್ಚಳ, ಹೆಚ್ಚುತ್ತಿರುವ ಜನಾಂಗೀಯ ದ್ವೇಷ, ಹಿಂಸಾಚಾರ, ಪ್ರಕೃತಿ ವಿಕೋಪ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಹಾರ ಹುಡುಕಲಾಗದ ‘ಮೋದಿ & ಕಂಪೆನಿ’ ತಮ್ಮ ಹುಳುಕು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ವಿಫಲಯತ್ನಗಳಿಗೆ ಕೈಹಾಕಿದೆ ಎಂದು ಟೀಕಿಸಿದ್ದಾರೆ.
ಅವಸರದಲ್ಲಿ ಕರೆಯಲಾದ ಸಂಸತ್ ನ ವಿಶೇಷ ಅಧಿವೇಶನ, ‘ಒಂದೇ ದೇಶ, ಒಂದೇ ಚುನಾವಣೆ’ಯ ಬಗ್ಗೆ ಅನವಶ್ಯಕ ಚರ್ಚೆಯ ಮೂಲಕ ಜ್ವಲಂತ ಸಮಸ್ಯೆಗಳನ್ನು ಜನರ ಕಣ್ಣುಗಳಿಂದ ಮರೆಮಾಚುವ ಹತಾಶ ಕೆಲಸಕ್ಕೆ ನರೇಂದ್ರ ಮೋದಿ ಮುಂದಾಗಿದ್ದಾರೆ. ರಾಹುಲ್ ಗಾಂಧಿ ಅವರ ಕ್ರಿಯಾತ್ಮಕ ಸಲಹೆಗಳು ವಿರೋಧಪಕ್ಷಗಳ ಸಂಘಟನೆಯ ಪ್ರಯತ್ನಕ್ಕೆ ಬಲ ತುಂಬಿದೆ. ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿನಿಂದಾಗಿ ಕೇಂದ್ರದಲ್ಲಿನ ಭ್ರಷ್ಟ ಬಿಜೆಪಿ ಸರ್ಕಾರ ಭೀತಿಗೊಳಗಾಗಿರುವುದು ಅದರ ಇತ್ತೀಚಿನ ನಡವಳಿಕೆಯಿಂದ ಸ್ಪಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಜನ ವಿರೋಧಿ ನಿಲುವು-ನಿರ್ಧಾರಗಳು, ವಂಚಕ ಉದ್ಯಮಪತಿಗಳೊಂದಿಗೆ ಸೇರಿ ನಡೆಸುತ್ತಿರುವ ಲೂಟಿ, ಮೈತ್ರಿಕೂಟವು ಎತ್ತುತ್ತಿರುವ ಪ್ರಶ್ನೆಗಳ ಬಗ್ಗೆ ಬಿಜೆಪಿಯ ನಾಯಕರ ಬಳಿ ಉತ್ತರವಿಲ್ಲ. ತಮ್ಮ ಉದ್ಯಮಪತಿ ಗೆಳೆಯ ಅದಾನಿ ಮತ್ತವರ ಸಂಸ್ಥೆಯ ವಿರುದ್ಧದ ಅಕ್ರಮಗಳ ಬಗ್ಗೆ ಜಾಗತಿಕವಾಗಿ ಆಪಾದನೆಗಳು ಕೇಳಿಬರುತ್ತಿದ್ದರೂ ನರೇಂದ್ರ ಮೋದಿ ಅವರು ತಾವೇ ಮುಂದಾಗಿ ಅದಾನಿ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.