ಬಿ.ಎಲ್.ಸಂತೋಷ್ ಮೊದಲು ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಬಿ. ಎಲ್ ಸಂತೋಷ್ ಅವರು ಮೊದಲು ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿ.ಎಲ್. ಸಂತೋಷ್ ಹೇಳಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದನ್ನು ಬಿಟ್ಟುಬಿಡಲಿ. ಪಕ್ಷದಲ್ಲಿರುವ ಶಾಸಕರನ್ನು,ಮಾಜಿ ಶಾಸಕರನ್ನು‌ ಉಳಿಸಿಕೊಳ್ಳಲಿ. ಬಿಜೆಪಿ ಪಕ್ಷದ ಅಸ್ತಿತ್ವ ಉಳಸಿಕೊಂಡರೆ ಸಾಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಬರೀ ಆಪರೇಶನ್ ಮಾಡಿ ಸರ್ಕಾರ ರಚನೆ ಮಾಡೋದಾ? ಬೆಳಗ್ಗೆಯಿಂದ ಸಾಯಂಕಾಲದ ವರೆಗೂ ಆಪರೇಶನ್ ‌ಮಾಡುವುದೇ ಬಿಜೆಪಿಯ ಕೆಲಸ. ಇಡೀ ರಾಷ್ಟ್ರದಲ್ಲಿ ಆಪರೇಶನ್ ಮಾಡೋದು. ಶಾಸಕರು ಸಂಪರ್ಕದಲ್ಲಿದ್ದರೆ ನಾಳೆಯಿಂದಲೇ ಆಪರೇಶನ್ ಸ್ಟಾರ್ಟ್ ಮಾಡಲಿ. ಕಾಂಗ್ರೆಸ್‌ಗೆ 136 ಸೀಟ್ ಬಂದಿದೆ. ರಾಜ್ಯದಲ್ಲಿ ಗಟ್ಟಿ ಮುಟ್ಟಾದ ಸರ್ಕಾರವಿದೆ. ಯಾರು ರಾಜೀನಾಮೆ ಕೊಟ್ಟು ಹೋಗುತ್ತಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದು ಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿರುವ ಬಿಜೆಪಿ, ಮುಳುಗುತ್ತಿರುವ ಹಡಗಿನಂತಾಗಿದೆ. ಇದಕ್ಕೆ ಕಾರಣ ಬಿಜೆಪಿ‌ ಕೆಲವೇ ಜನರ ಕೈಯಲ್ಲಿರೋದು. ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರೋದು ಬಿಜೆಪಿ ಕೆಲಸ. ರಾಜ್ಯ ಬಿಜೆಪಿ ನಾಯಕರ ಪರಸ್ಥಿತಿ ಇಡೀ ಜಗತ್ತಿಗೆ ಗೊತ್ತಾಗಿದೆ. ಬಿ.ಎಲ್. ಸಂತೋಷ್ ಅವರ ಬಗ್ಗೆ ದೆಹಲಿಯಲ್ಲಿ ಕೂತ ಬಿಜೆಪಿ ನಾಯಕರು ಯೋಚನೆ ಮಾಡಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!